ADVERTISEMENT

ಸೆ.7ರಿಂದ ಮೆಟ್ರೊ ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರದ ಮಾರ್ಗಸೂಚಿ

ಏಜೆನ್ಸೀಸ್
Published 2 ಸೆಪ್ಟೆಂಬರ್ 2020, 15:48 IST
Last Updated 2 ಸೆಪ್ಟೆಂಬರ್ 2020, 15:48 IST
ಮೆಟ್ರೊ ರೈಲು
ಮೆಟ್ರೊ ರೈಲು   

ನವದೆಹಲಿ: ಕೋವಿಡ್‌-19 ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೆಟ್ರೊ ರೈಲು ಸಂಚಾರ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. ಸೆ.7ರಿಂದ ಬೆಂಗಳೂರು ನಗರ ಸೇರಿದಂತೆ ದೇಶದ ವಿವಿಧ ಮಹಾನಗರಗಳಲ್ಲಿ ಮೆಟ್ರೊ ರೈಲುಗಳ ಸಾರ್ವಜನಿಕ ಸೇವೆ ಆರಂಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರು 'ಕೆಲವು ನಿಬಂಧನೆಗಳ ಜೊತೆಗೆ, ವಿವಿಧ ಹಂತಗಳಲ್ಲಿ ಮೆಟ್ರೊ ರೈಲು ಸಂಚಾರ ಸೇವೆಗಳು ಆರಂಭವಾಗಲಿದೆ. ಮೊದಲಿಗೆ ಕೆಲವೇ ಮಾರ್ಗಗಳಲ್ಲಿ ರೈಲುಗಳು ಕಾರ್ಯನಿರ್ವಹಿಸಲಿವೆ' ಎಂದು ತಿಳಿಸಿದ್ದಾರೆ.

ಪ್ರಯಾಣಿಕರು ಮಾಸ್ಕ್‌ಗಳನ್ನು ಧರಿಸುವುದು ಕಡ್ಡಾಯವಾಗಿದ್ದು, ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಜನರ ಆಯ್ಕೆಗೆ ಬಿಟ್ಟಿದ್ದು ಎಂದು ಸಚಿವ ಪುರಿ ಹೇಳಿದ್ದಾರೆ.

ADVERTISEMENT

ಮೆಟ್ರೊ ಪುನರಾರಂಭಕ್ಕೆ ಕೇಂದ್ರ ನೀಡಿರುವ ಮಾರ್ಗಸೂಚಿಯಲ್ಲಿ ಏನಿದೆ?

* ಕಂಟೈನ್‌ಮೆಂಟ್‌ ವಲಯಗಳಲ್ಲಿನ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಬೇಕು

* ದೈಹಿಕ ಅಂತರ ಖಚಿತಪಡಿಸಿಕೊಳ್ಳಲು, ನಿಲ್ದಾಣಗಳಲ್ಲಿ ಮತ್ತು ರೈಲುಗಳ ಒಳಗೆ ಸೂಕ್ತವಾದ ಸಾಂಕೇತಿಕ ಗುರುತುಗಳನ್ನು ಮಾಡಬೇಕು

* ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಮಾಸ್ಕ್‌ ಇಲ್ಲದೇ ಬರುವ ವ್ಯಕ್ತಿಗಳ ಬಳಿ ಹಣ ಪಾವತಿಸಿಕೊಂಡು ಮಾಸ್ಕ್‌ ಪೂರೈಸುವ ವ್ಯವಸ್ಥೆಯನ್ನು ಮೆಟ್ರೊ ರೈಲು ನಿಗಮಗಳು ಮಾಡಬಹುದು.

* ನಿಲ್ದಾಣಗಳಿಗೆ ಪ್ರವೇಶಿಸುವ ವ್ಯಕ್ತಿಗಳ ಉಷ್ಣ ತಪಾಸಣೆ ನಡೆಸಬೇಕು. ರೋಗಲಕ್ಷಣವಿಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಬೇಕು. ರೋಗಲಕ್ಷಣವಿರುವ ವ್ಯಕ್ತಿಗಳಿಗೆ ಪರೀಕ್ಷೆ ಅಥವಾ ವೈದ್ಯಕೀಯ ತಪಾಸನೆಗಾಗಿ ಹತ್ತಿರದ ಆರೈಕೆ ಕೇಂದ್ರ / ಆಸ್ಪತ್ರೆಗೆ ಹೋಗಲು ಸೂಚಿಸಬೇಕು. ಆರೋಗ್ಯ ಸೇತು ಅಪ್ಲಿಕೇಶನ್‌ ಬಳಕೆಯನ್ನು ಪ್ರೋತ್ಸಾಹಿಸಬೇಕು.

* ನಿಲ್ದಾಣಗಳಿಗೆ ಪ್ರವೇಶಿಸುವಾಗ ಪ್ರಯಾಣಿಕರಿಗೆ ಸ್ಯಾನಿಟೈಸರ್‌ ಒದಗಿಸಬೇಕು. ಮೆಟ್ರೊ ರೈಲು ಮತ್ತು ನಿಲ್ದಾಣಗಳಲ್ಲಿನ ಉಪಕರಣಗಳು, ಲಿಫ್ಟ್‌, ಎಸ್ಕಲೇಟರ್‌ಗಳು ಮತ್ತು ಶೌಚಾಲಯಗಳನ್ನು ನಿಯಮಿತವಾಗಿ ಸ್ಯಾನಿಟೈಸ್‌ ಮಾಡಬೇಕು.

* ಸ್ಮಾರ್ಟ್ ಕಾರ್ಡ್ ಬಳಕೆ ಮತ್ತು ನಗದು ರಹಿತ ಆನ್‌ಲೈನ್ ವಹಿವಾಟುಗಳನ್ನು ಪ್ರೋತ್ಸಾಹಿಸಬೇಕು. ಸರಿಯಾಗಿ ಶುಚಿಗೊಳಿಸಿದ ಟೋಕನ್‌ಗಳು ಮತ್ತು ಚೀಟಿಗಳನ್ನು ಬಳಸಬೇಕು.

* ಜನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲ ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನು ತಪ್ಪಿಸುವ ನಿರ್ಧಾರಗಳನ್ನು ಮೆಟ್ರೊ ರೈಲು ನಿಗಮಗಳು ಕೈಗೊಳ್ಳಬಹುದು.

* ಮಾಧ್ಯಮ, ಸಾಮಾಜಿಕ ಜಾಲತಾಣ, ಪೋಸ್ಟರ್, ಬ್ಯಾನರ್, ಹೋರ್ಡಿಂಗ್, ವೆಬ್‌ಸೈಟ್ ಇತ್ಯಾದಿಗಳ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಮಾಹಿತಿ ಮತ್ತು ಸಂವಹನ ಅಭಿಯಾನವನ್ನು ಪ್ರಾರಂಭಿಸಬೇಕು.

* ನಿಲ್ದಾಣದ ಹೊರಗಿನ ಜನಸಂದಣಿ ನಿಯಂತ್ರಿಸಲು ಮತ್ತು ತುರ್ತು ಪರಿಸ್ಥಿತಿ ಎದುರಿಸಲು ರಾಜ್ಯ ಪೊಲೀಸ್ ಮತ್ತು ಸ್ಥಳೀಯ ಆಡಳಿತದೊಂದಿಗೆ ಮೆಟ್ರೋ ರೈಲು ನಿಗಮಗಳು ನಿಕಟ ಸಂಪರ್ಕ ಹೊಂದಿರಬೇಕು.

* ಮೆಟ್ರೊ ಸಂಚಾರವನ್ನು ಶ್ರೇಣೀಕೃತ ರೀತಿಯಲ್ಲಿ ಪುನರಾರಂಭಿಸಬೇಕು. ಒಂದಕ್ಕಿಂತ ಹೆಚ್ಚು ಮಾರ್ಗಗಳನ್ನು ಹೊಂದಿರುವ ಮೆಟ್ರೊಗಳು ಸೆಪ್ಟೆಂಬರ್ 7, 2020ರಿಂದ ಸಂಚರಿಸಬೇಕು. ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಮಾರ್ಗಗಳಲ್ಲಿ ಸೆಪ್ಟೆಂಬರ್ 12, 2020ರೊಳಗೆ ರೈಲುಗಳು ಕಾರ್ಯ ನಿರ್ವಹಿಸಬೇಕು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.