ADVERTISEMENT

‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ಸ್ವೀಕರಿಸಿದ ನೀತಾ ಅಂಬಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮಾರ್ಚ್ 2024, 7:21 IST
Last Updated 10 ಮಾರ್ಚ್ 2024, 7:21 IST
<div class="paragraphs"><p>ನೀತಾ ಅಂಬಾನಿ</p></div>

ನೀತಾ ಅಂಬಾನಿ

   

ಮುಂಬೈ: ನಗರದ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 71ನೇ ವಿಶ್ವ ಸುಂದರಿ ಫಿನಾಲೆ ಕಾರ್ಯಕ್ರಮದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಮುಖೇಶ್ ಅಂಬಾನಿ ಅವರಿಗೆ ‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.

ನೀತಾ ಮುಖೇಶ್ ಅವರ ಸಾಮಾಜಿಕ ಸೇವೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.

ADVERTISEMENT

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ನೀತಾ ಅಂಬಾನಿ, ‘ನಾವು ರಿಲಯನ್ಸ್ ಫೌಂಡೇಶನ್‌ನಲ್ಲಿ ಸತ್ಯಂ ಶಿವಂ ಸುಂದರಂ ತತ್ವಗಳನ್ನು ಅನುಸರಿಸಿಕೊಂಡು ಬಂದಿದ್ದೇವೆ. ಆದೇ ರೀತಿ ನಾವು ಪ್ರತಿಯೊಬ್ಬ ಭಾರತೀಯರನ್ನು ವಿಶೇಷವಾಗಿ ಮಹಿಳೆಯರು ಮತ್ತು ಯುವತಿಯರನ್ನು ಶಿಕ್ಷಣ, ಆರೋಗ್ಯ ರಕ್ಷಣೆ, ಕ್ರೀಡಾ ಕ್ಷೇತ್ರಗಳಲ್ಲಿ ಸಬಲೀಕರಣಗೊಳಿಸಲು ಪ್ರಯತ್ನವನ್ನು ಮಾಡುತ್ತಿದ್ದೇವೆ. ನಾನು ಈ ಪ್ರಶಸ್ತಿಯನ್ನು ಕೃತಜ್ಞತೆ ಮತ್ತು ನಮ್ರತೆಯಿಂದ ಸ್ವೀಕರಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ಎಲ್ಲಾ ಯುವತಿಯರಿಗೆ ಅಭಿನಂದನೆಗಳು. ನೀವೆಲ್ಲರೂ ಉತ್ತಮ ನಾಳೆಗಾಗಿ ಭರವಸೆಗಳು, ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತಿದ್ದೀರಿ. ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಾನು ದೃಢವಾಗಿ ನಂಬುತ್ತೇನೆ. ಈ ಶತಮಾನ ಮಹಿಳೆಯರಿಗೆ ಸೇರಿದ್ದು, ಮಹಿಳೆಯರು ಏನು ಬೇಕಾದರೂ ಸಾಧನೆ ಮಾಡಬಹುದು’ ಎಂದು ಹೇಳಿದ್ದಾರೆ.

ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್, ಮಾಜಿ ವಿಶ್ವ ಸುಂದರಿ ಫಿಲಿಪ್ಪೀನ್ಸ್‌ನ ಮೇಗನ್ ಯಂಗ್ ಅವರ ನೇತೃತ್ವದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ನಟಿಯರಾದ ಕೃತಿ ಸನೋನ್, ಪೂಜಾ ಹೆಗ್ಡೆ ಮತ್ತು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾಗೆ ಅವರು 2024ನೇ ಸಾಲಿನ ‘ವಿಶ್ವ ಸುಂದರಿ’ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಬಾರಿಯ ಸ್ಪರ್ಧೆಯಲ್ಲಿ ಹಲವು ದೇಶಗಳ 112 ಸುಂದರಿಯರು ಪಾಲ್ಗೊಂಡಿದ್ದರು.

28 ವರ್ಷಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಭಾರತದಲ್ಲಿ ಕೊನೆಯದಾಗಿ 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ 46ನೇ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಆಗ ಗ್ರೀಸ್‌ನ ಐರಿನ್ ಸ್ಕ್ಲಿವಾ ಪ್ರಶಸ್ತಿಯನ್ನು ಗೆದ್ದಿದ್ದರು.

70ನೇ ಆವೃತ್ತಿಯ ಸ್ಪರ್ಧೆಯಲ್ಲಿ ಪೋಲೆಂಡ್‌ನ ಕರೋಲಿನಾ ಬೈಲಾವ್ಸ್ಕಾಅವರು 2022ನೇ ಸಾಲಿನ ‘ವಿಶ್ವ ಸುಂದರಿ’ ಗೌರವಕ್ಕೆ ಪಾತ್ರರಾಗಿದ್ದರು. ಆಗ 96 ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.