ನರವಣೆ ಹಾಗೂ ರಾಹುಲ್ ಗಾಂಧಿ
ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರ ಆತ್ಮಚರಿತ್ರೆ ಬಗ್ಗೆ ಪ್ರಟಕವಾದ ಲೇಖನವನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಉಲ್ಲೇಖಿಸಿದ್ದು ಲೋಕಸಭೆಯಲ್ಲಿ ಸೋಮವಾರ ಗದ್ದಲಕ್ಕೆ ಕಾರಣವಾಯಿತು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಆದಿಯಾಗಿ ಆಡಳಿತ ಪಕ್ಷದ ಸದಸ್ಯರು ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದರು.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿ ರಾಹುಲ್ ಗಾಂಧಿ,
‘ರಾಷ್ಟ್ರೀಯ ಭದ್ರತೆ’ಯ ವಿಷಯ ಎಂದು ನರವಣೆಯವರ ಅಪ್ರಕಟಿತ ಪುಸ್ತಕದ ಬಗ್ಗೆ ‘ದಿ ಕ್ಯಾರವಾನ್’ನಲ್ಲಿ ಬಂದ ಲೇಖನವನ್ನು ಉಲ್ಲೇಖಿಸಿದರು. ಇದಕ್ಕೆ ಆಡಳಿತ ಪಕ್ಷದಿಂದ ಭಾರಿ ವಿರೋಧ ಎದುರಾಯಿತು. ವಿರೋಧ ಪಕ್ಷಗಳ ಸದಸ್ಯರು ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತರು. ಗದ್ದಲ ಉಂಟಾಗಿ ಕೊನೆಗೆ ಸದನವನ್ನು ಮುಂದೂಡಲಾಯಿತು.
ಈ ವಿಷಯ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸಂಬಂಧಿಸಿದ್ದಲ್ಲವೆಂದೂ. ಅಪ್ರಕಟಿತ ಪುಸ್ತಕದ ಉಲ್ಲೇಖ ಮಾಡುವಂತಿಲ್ಲ ಎಂದು ಆಡಳಿತ ಪಕ್ಷಗಳ ಸದಸ್ಯರು ಗದ್ದಲವೆಬ್ಬಿಸಿದರು.
ನರವಣೆಯವರ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ (ಅಪ್ರಕಟಿತ) ಪುಸ್ತಕದ ಬಗ್ಗೆ ಕ್ಯಾರವಾನ್ ಲೇಖನ ಪ್ರಕಟಿಸಿತ್ತು. ‘ಪೆಂಗ್ವಿನ್ ರಾಂಡಮ್ ಬುಕ್ಸ್’ ಇದನ್ನು ಪ್ರಕಟಿಸಲಿದೆ. ಪುಸ್ತಕ ಪ್ರಕಟಣೆಗೆ ರಕ್ಷಣಾ ಇಲಾಖೆಯ ಅನುಮತಿಗೆ ಕಳೆದ ಒಂದೂವರೆ ವರ್ಷದಿಂದ ಕಾಯಲಾಗುತ್ತಿದೆ ಎಂದು ಹೇಳಲಾಗಿದೆ.
ಸೇನಾ ಕಾರ್ಯಾಚರಣೆ ಹಾಗೂ ಸರ್ಕಾರದ ನೀತಿಗಳ ಬಗ್ಗೆ ಆ ಪುಸ್ತಕದಲ್ಲಿ ಉಲ್ಲೇಖವಿದ್ದು, ಹೀಗಾಗಿ ಪ್ರಕಟಣೆ ವಿಳಂಬವಾಗಿದೆ ಎಂದು ಹೇಳಲಾಗಿದೆ.
‘ಇದು ಸೇನಾ ಮುಖ್ಯಸ್ಥರು ಬರೆದ ಪುಸ್ತಕ. ಇದರ ಪ್ರಕಟಣೆಗೆ ಅವಕಾಶ ನೀಡುತ್ತಿಲ್ಲ. ಸರ್ಕಾರ ಸೇನಾ ಮುಖ್ಯಸ್ಥರಿಗೆ ಯಾಕೆ ಹೆದರುತ್ತಿದೆ’ ಎಂದು ರಾಹುಲ್ ಗಾಂಧಿ ಮಾಧ್ಯಮದವರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಚೀನಾ ಹಾಗೂ ಭಾರತದ ಸೇನೆ ನಡುವೆ ಘರ್ಷಣೆ ನಡೆದಾಗ ನರವಣೆಯವರು ಸೇನಾ ಮುಖ್ಯಸ್ಥರಾಗಿದ್ದರು. ಅವರ ಅವಧಿಯಲ್ಲೇ ಸರ್ಕಾರ ವಿವಾದಿತ ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿತ್ತು.
2020ರ ಜೂನ್ 15–16ರಂದು ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿಯ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಕರ್ನಲ್ ದರ್ಜೆಯ ಓರ್ವ ಅಧಿಕಾರಿ ಸೇರಿ ಭಾರತೀಯ ಸೇನೆಯ 20 ಯೋಧರು ಸಾವಿಗೀಡಾಗಿದ್ದರು. ಚೀನಾ ಸೇನೆಯ ಸಾವು ನೋವುಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಗಲ್ವಾನ್ ಕಣಿವೆಯಲ್ಲಿ ಸಂಘರ್ಷದ ಪರಿಸ್ಥಿತಿ ಇದ್ದಾಗ, 2020ರ ಆಗಸ್ಟ್ 31ರಂದು ನವರಣೆಯವರು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಕರೆ ಮಾಡಿರುವ ಬಗ್ಗೆ ಪುಸ್ತಕದಲ್ಲಿ ಉಲ್ಲೇಖವಿದೆ ಎಂದು ಗೊತ್ತಾಗಿದೆ.
‘ನಾನು ಪ್ರಧಾನಿಯೊಂದಿಗೆ ಮಾತನಾಡುತ್ತೇನೆ. ಅದು ಸಂಪೂರ್ಣ ಸೇನೆಯ ನಿರ್ಧಾರವಾಗಿತ್ತು. ಸರಿ ಎಂದು ಅನಿಸಿದ್ದನ್ನು ಮಾಡಿ’ ಎಂದು ಅವರು (ರಾಜನಾಥ ಸಿಂಗ್) ಹೇಳಿದರು. ನನ್ನನ್ನು ಸಂಕಷ್ಟಕ್ಕೆ ದೂಡಲಾಯಿತು. ನಿಮಗೆ ತೋಚಿದಂತೆ ಮಾಡಿ ಎಂದು ಹೇಳುವ ಮೂಲಕ ಇಡೀ ಹೊಣೆಗಾರಿಕೆ ನನ್ನ ಮೇಲೆ ಬಿತ್ತು. ದೀರ್ಘ ಉಸಿರೆಳೆದು ಕೆಲ ಹೊತ್ತು ಮೌನವಾಗಿ ಕುಳಿತೆ’ ಎಂದು ನರವಣೆಯವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ ಎಂದು ಮೂಲಗಳು ಪಿಟಿಐಗೆ ತಿಳಿಸಿದೆ.
‘ಪುಸ್ತಕ ಕಳೆದೊಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಪರಿಶೀಲನೆಯಲ್ಲಿದೆ’ ಎಂದು 2025ರಲ್ಲಿ ಅಕ್ಟೋಬರ್‌ನಲ್ಲಿ ಹೇಳಿದ್ದರು.
‘ಪುಸ್ತಕ ಬರೆದು ಪ್ರಕಾಶಕರಿಗೆ ಕೊಡುವುದು ನನ್ನ ಕೆಲಸ. ರಕ್ಷಣಾ ಇಲಾಖೆಯ ಅನುಮತಿ ಪಡೆಯುವುದು ಪ್ರಕಾಶಕರ ಕೆಲಸ. ಒಂದು ವರ್ಷ ಕಳೆಯಿತು. ಇನ್ನೂ ಪರಿಶೀಲನೆಯಲ್ಲಿದೆ. ಪ್ರಕಾಶಕರು ಹಾಗೂ ರಕ್ಷಣಾ ಇಲಾಖೆ ಪರಸ್ಪರ ಸಂಪರ್ಕದಲ್ಲಿದ್ದಾರೆ’ ಎಂದು ನರವಣೆ ಹೇಳಿದ್ದಾರೆ.
‘ಅದನ್ನು ಫಾಲೋಅಪ್ ಮಾಡುವುದು ನನ್ನ ಕೆಲಸವಲ್ಲ. ಪ್ರಕಾಶಕರು ಹಾಗೂ ರಕ್ಷಣಾ ಇಲಾಖೆಯ ಅಂಗಳದಲ್ಲಿ ಚೆಂಡು ಇದೆ. ಒಳ್ಳೆಯದೋ, ಕೆಟ್ಟದೋ ಪುಸ್ತಕ ಬರವಣಿಗೆಯನ್ನು ನಾನು ಆನಂದಿಸಿದ್ದೇನೆ. ಸೂಕ್ತವೆಂದು ಅನಿಸಿದಾಗ ರಕ್ಷಣಾ ಸಚಿವಾಲಯ ಅನುಮತಿ ಕೊಡಬಹುದು’ ಎಂದು ಅವರು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.