ADVERTISEMENT

ಮೋದಿ ಸರ್ಕಾರ ಕೇವಲ ಮತಕ್ಕಾಗಿ ಭಾರತದ ಅಭಿವೃದ್ಧಿ ಮಾಡುತ್ತಿಲ್ಲ: ಜಾವಡೇಕರ್‌

ಪಿಟಿಐ
Published 3 ಜನವರಿ 2023, 15:23 IST
Last Updated 3 ಜನವರಿ 2023, 15:23 IST
ಮಾಜಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ | ಪಿಟಿಐ ಚಿತ್ರ
ಮಾಜಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ | ಪಿಟಿಐ ಚಿತ್ರ   

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇವಲ ಮತಕ್ಕಾಗಿ ಭಾರತವನ್ನು ಅಭಿವೃದ್ಧಿ ಮಾಡುತ್ತಿಲ್ಲ ಎಂದು ಮಾಜಿ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ಕೇರಳದ ತಿರುವನಂತಪುರಂನಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದ ಬಿಜೆಪಿಯ ಹಿರಿಯ ಮುಖಂಡ ಜಾವಡೇಕರ್‌, ಮೋದಿ ಸರ್ಕಾರವು ಜನರನ್ನು ಅಥವಾ ರಾಜ್ಯಗಳನ್ನು ರಾಜಕೀಯ ತಾರತಮ್ಯದ ದೃಷ್ಟಿಯಲ್ಲಿ ನೋಡುತ್ತಿಲ್ಲ ಎಂದರು.

ಮೋದಿ ಸರ್ಕಾರವು ಎಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೂ ತಲುಪಿಸುವ ಪ್ರಯತ್ನ ನಡೆಸುತ್ತಿದೆ ಎಂದರು.

ADVERTISEMENT

ಇದೇ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದ ಜಾವಡೇಕರ್‌, ನರೇಂದ್ರ ಮೋದಿ ಮಾಡಿದ ಕೆಲಸಗಳನ್ನು ಸ್ವಾಧೀನಪಡಿಸಿಕೊಳ್ಳುವ ಅಭ್ಯಾಸ ಹೊಂದಿದ್ದಾರೆ. ಕೇಂದ್ರ ಸರ್ಕಾರವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಕೇರಳ ಸರ್ಕಾರವು ಆಭಾರಿಯಾಗಿಲ್ಲ ಎಂದು ಆರೋಪಿಸಿದರು.

ನಾವು ಭಾರತವನ್ನು ಕೇವಲ ಮತಗಳಿಗಾಗಿ ಅಭಿವೃದ್ಧಿ ಮಾಡುತ್ತಿಲ್ಲ. ಯಾರು ನಮಗೆ ಮತ ಹಾಕಿದ್ದಾರೋ ಅಥವಾ ಹಾಕಿಲ್ಲವೋ.. ಮೋದಿ ಸರ್ಕಾರವು ಜಾತಿ, ಧರ್ಮ ಅಥವಾ ಲಿಂಗದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ. ಎಲ್ಲರಿಗೂ ನ್ಯಾಯವನ್ನು ಒದಗಿಸುತ್ತೇವೆ. ಯಾರು ಯಾವ ರಾಜಕೀಯದ ಬಣ್ಣವನ್ನು ಧರಿಸಿದ್ದಾನೆ ಎಂಬುದನ್ನು ನೋಡದೆ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುತ್ತೇವೆ ಎಂದರು.

ಕೇರಳದ ಶೇ 95ಕ್ಕೂ ಹೆಚ್ಚು ಜನರು ಉಚಿತವಾಗಿ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದೂ ಈ ಸಂದರ್ಭ ತಿಳಿಸಿದರು.

ಕಳೆದ 28 ತಿಂಗಳಲ್ಲಿ ಕೇರಳದ ಒಟ್ಟು 1.5 ಕೋಟಿ ಮಂದಿಗೆ ತಲಾ 140 ಕೆಜಿ ಅಕ್ಕಿ ವಿತರಿಸಲಾಗಿದೆ. ಮುದ್ರಾ ಯೋಜನೆಯಿಂದ 47 ಲಕ್ಷ ಜನರು ಸಾಲ ಸೌಲಭ್ಯ ಪಡೆದಿದ್ದಾರೆ. ಹಾಗಾಗಿ ಕೇರಳದ ಯಾವ ಭಾಗಕ್ಕೆ ಹೋದರು ಅಲ್ಲಿನ ಜನ ಮೋದಿಗೆ ಧನ್ಯವಾದ ಹೇಳುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.