ADVERTISEMENT

ವಾಣಿಜ್ಯ ನಗರಿ ಮುಂಬೈಯಲ್ಲಿ ಬ್ರಿಟನ್ ಪ್ರಧಾನಿ ಜೊತೆ ಮೋದಿ ಮಾತುಕತೆ

ಪಿಟಿಐ
Published 9 ಅಕ್ಟೋಬರ್ 2025, 9:15 IST
Last Updated 9 ಅಕ್ಟೋಬರ್ 2025, 9:15 IST
<div class="paragraphs"><p>ಕೀರ್‌ ಸ್ಟಾರ್ಮರ್‌, ನರೇಂದ್ರ ಮೋದಿ</p></div>

ಕೀರ್‌ ಸ್ಟಾರ್ಮರ್‌, ನರೇಂದ್ರ ಮೋದಿ

   

(ಚಿತ್ರ ಕೃಪೆ: X/@narendramodi)

ಮುಂಬೈ: ಭಾರತಕ್ಕೆ ಭೇಟಿ ನೀಡಿರುವ ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರನ್ನು ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು (ಗುರುವಾರ) ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ADVERTISEMENT

ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ವ್ಯಾಪಾರ, ವಾಣಿಜ್ಯ, ರಕ್ಷಣೆ, ಭದ್ರತೆ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಹಾಗೂ ಬ್ರಿಟನ್ ನಡುವಣ ಸಹಕಾರ ಮತ್ತಷ್ಟು ಗಟ್ಟಿಗೊಳಿಸುವತ್ತ ಚರ್ಚಿಸಲಾಯಿತು.

ಉದ್ಯಮಿ, ತಜ್ಞರು ಸೇರಿದಂತೆ 125 ಮಂದಿಯನ್ನು ಒಳಗೊಂಡ ಬೃಹತ್ ನಿಯೋಗದೊಂದಿಗೆ ಬ್ರಿಟನ್ ಪ್ರಧಾನಿ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಬ್ರಿಟನ್ ಪ್ರಧಾನಿ ಕೀರ್‌ ಸ್ಟಾರ್ಮರ್‌, 'ನಾವು ಜುಲೈ ತಿಂಗಳಲ್ಲಿ ಭಾರತದೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೆವು. ಯಾವುದೇ ದೇಶ ಮಾಡಿದ ಅತ್ಯುತ್ತಮ ಒಪ್ಪಂದ ಇದಾಗಿತ್ತು. ಇದು ಇಲ್ಲಿಗೆ ನಿಲ್ಲುವುದಿಲ್ಲ. ಇದು ಆರಂಭವಷ್ಟೇ, 2028ರ ವೇಳೆಗೆ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಅವರೊಂದಿಗಿನ ವ್ಯಾಪಾರವು ತ್ವರಿತ ಮತ್ತು ಅಗ್ಗವಾಗಲಿದ್ದು, ಅಪೂರ್ವವಾದ ಅವಕಾಶಗಳು ದೊರೆಯಲಿವೆ ಎಂದು ಉಲ್ಲೇಖಿಸಿದ್ದಾರೆ.

ಜುಲೈನಲ್ಲಿ ಭಾರತ ಮತ್ತು ಬ್ರಿಟನ್‌ ನಡುವೆ ಲಂಡನ್‌ನಲ್ಲಿ ಮಹತ್ವದ ವ್ಯಾಪಾರ ಒಪ್ಪಂದ ಏರ್ಪಟ್ಟಿತ್ತು.

ಇದೀಗ ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿರುವ ಎರಡೂವರೆ ತಿಂಗಳ ನಂತರ ಸ್ಟಾರ್ಮರ್‌ ಭಾರತಕ್ಕೆ ಭೇಟಿ ನೀಡಿದ್ದಾರೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ನಿರೀಕ್ಷೆ ಹೊಂದಲಾಗಿದೆ.

ಬ್ರಿಟನ್ ಪ್ರಧಾನಿ ಅವರೊಂದಿಗಿನ ಭೇಟಿ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದದಿಂದ ಯುವಜನತೆಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಎರಡೂ ರಾಷ್ಟ್ರಗಳ ಕೈಗಾರಿಕೋದ್ಯಮ ಹಾಗೂ ಗ್ರಾಹಕರಿಗೆ ಪ್ರಯೋಜವಾಗಲಿವೆ. ಭವಿಷ್ಯದಲ್ಲಿ ವ್ಯಾಪಾರ ಗಟ್ಟಿಗೊಳಿಸಲು ಬ್ರಿಟನ್ ಪ್ರಧಾನಿ ಅವರೊಂದಿಗೆ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ತಂತ್ರಜ್ಞಾನ, ರಕ್ಷಣೆ, ಎಐ, ಸುಸ್ಧಿರ ಅಭಿವೃದ್ಧಿ, ನವೀಕರಿಸಬಹುದಾದ ಇಂಧನ ಕುರಿತಾಗಿಯೂ ಚರ್ಚಿಸಲಾಯಿತು. ಬ್ರಿಟನ್ ಜೊತೆ ಶೈಕ್ಷಣಿಕ, ಸಾಂಸ್ಕೃತಿಕ ಬಾಂಧವ್ಯವನ್ನು ಹೆಚ್ಚಿಸಲು ಎದುರು ನೋಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.