ADVERTISEMENT

'ಮಹಾ ಜಂಗಲ್ ರಾಜ್' ಪರಿಸ್ಥಿತಿಯನ್ನು ಅಂತ್ಯಗೊಳಿಸಬೇಕು: ಮಮತಾಗೆ ಮೋದಿ ತಿರುಗೇಟು

ಪಿಟಿಐ
Published 18 ಜನವರಿ 2026, 13:59 IST
Last Updated 18 ಜನವರಿ 2026, 13:59 IST
<div class="paragraphs"><p>ನರೇಂದ್ರ ಮೋದಿ, ಮಮತಾ ಬ್ಯಾನರ್ಜಿ&nbsp;</p></div>

ನರೇಂದ್ರ ಮೋದಿ, ಮಮತಾ ಬ್ಯಾನರ್ಜಿ 

   

ಸಿಂಗೂರ್(ಪಶ್ಚಿಮ ಬಂಗಾಳ): ‘ಮತ ಬ್ಯಾಂಕ್‌ ರಾಜಕೀಯಕ್ಕಾಗಿ ನುಸುಳುಕೋರರನ್ನು ರಕ್ಷಿಸುವ ಮೂಲಕ‌ ಸರ್ಕಾರ ದೇಶದ ಭದ್ರತೆಗೆ ಧಕ್ಕೆ ತರುತ್ತಿರುವ ಟಿಎಂಸಿ ಸರ್ಕಾರದ ‘ಮಹಾ ಜಂಗಲ್‌ ರಾಜ್‌’ ಆಡಳಿತವನ್ನು ಕೊನೆಗಳಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಹೂಗ್ಲಿ ಜಿಲ್ಲೆಯ ಸಿಂಗೂರಿನಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರುಸ್ಥಾಪಿಸಬೇಕು. ನಕಲಿ ದಾಖಲೆಗಳನ್ನು ಬಳಸಿಕೊಂಡು ರಾಜ್ಯದಲ್ಲಿ ನೆಲೆಸಿರುವ ನುಸುಳುಕೋರರನ್ನು ಗುರುತಿಸಿ ವಾಪಸ್ ಕಳುಹಿಸಬೇಕು’ ಎಂದು ಅವರು ಹೇಳಿದರು.

ADVERTISEMENT

ಮುಂಬರುವ ವಿಧಾನಸಭಾ ಚುನಾವಣೆಯು ‘ಮಹಾ-ಜಂಗಲ್ ರಾಜ್ ಮತ್ತು ಉತ್ತಮ ಆಡಳಿತ’ದ ನಡುವಿನ ಸ್ಪರ್ಧೆ ಎಂದು ವಿಶ್ಲೇಷಿಸಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ನೀಡುವ ಮೂಲಕ ‘ಡಬಲ್-ಎಂಜಿನ್ ಸರ್ಕಾರ’ದ ಮಾದರಿ ಬೆಂಬಲಿಸುವಂತೆ ಮನವಿ ಮಾಡಿದರು.

‘ಒಳನುಸುಳುಕೋರರನ್ನು ತಮ್ಮ ಮತ ಬ್ಯಾಂಕ್ ಎಂದು ಪರಿಗಣಿಸುವ ಟಿಎಂಸಿ, ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ. ಬಂಗಾಳದ ಗಡಿಗಳಲ್ಲಿ, ರಾಜ್ಯ ಸರ್ಕಾರದ ರಕ್ಷಣೆಯಲ್ಲೇ ಅಕ್ರಮ ವಲಸಿಗರು ಅಭಿವೃದ್ಧಿ ಹೊಂದಲು ಅವಕಾಶ ನೀಡಲಾಗಿದೆ’ ಎಂದು ಮೋದಿ ಆರೋಪಿಸಿದರು.

‘ಹಲವು ವರ್ಷಗಳಿಂದ ಗಡಿಯಲ್ಲಿ ಬೇಲಿ ಹಾಕುವುದನ್ನು ಸ್ಥಗಿತಗೊಳಿಸಲಾಗಿದೆ. ನಕಲಿ ದಾಖಲೆಗಳನ್ನು ತಯಾರಿಸಲಾಗುತ್ತಿದೆ. ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಯಲು ಮತ್ತು ನಕಲಿ ದಾಖಲೆಗಳೊಂದಿಗೆ ನುಸುಳಿದವರನ್ನೂ ಗುರುತಿಸಿ ವಾಪಸ್ ಕಳುಹಿಸಲು ಇದು ಸಕಾಲವಾಗಿದೆ. ಬಿಜೆಪಿ ಸರ್ಕಾರ ಆ ಕೆಲಸ ಮಾಡುತ್ತದೆ’ ಎಂದು ಪ್ರಧಾನಿ ಹೇಳಿದರು.

‘ಗಡಿಯಲ್ಲಿ ನಿರ್ಣಾಯಕ ಭದ್ರತಾ ಕ್ರಮಗಳನ್ನು ಅಳವಡಿಸುವುದಕ್ಕೆ ಟಿಎಂಸಿ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ ಮೋದಿ, ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರ ಬೇಲಿ ಹಾಕುವುದಕ್ಕೆ ಭೂಮಿ ನೀಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ ಏನೂ ಪ್ರಯೋಜನವಾಗಿಲ್ಲ’ ಎಂದು ಟಿಎಂಸಿ ಸರ್ಕಾರದ ವಿರುದ್ಧ ದೂರಿದರು.

‘ನುಸುಳುಕೋರರಿಗೆ ಆಶ್ರಯ ನೀಡುವ ಹಾಗೂ ಅದಕ್ಕೆ ಪೂರಕವಾದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಡುವ ಮೂಲಕ ಆಡಳಿತಾರೂಢ ಟಿಎಂಸಿ ಪಕ್ಷ, ನುಸುಳುಕೋರರನ್ನು ರಕ್ಷಿಸಲು ಯಾವುದೇ ಹಂತಕ್ಕೆ ಬೇಕಾದರೂ ಹೋಗಬಹುದು ’ ಎಂದು ಮೋದಿ ಹೇಳಿದರು.

‘ದೇಶಾದ್ಯಂತ ಮತದಾರರು ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ತಡೆಯೊಡ್ಡುವ ಸರ್ಕಾರಗಳನ್ನು ತಿರಸ್ಕರಿಸುತ್ತಿದ್ದಾರೆ’ ಎಂದು ಪ್ರತಿಪಾದಿಸಿದ ಮೋದಿ ಅವರು, ‘ಬಂಗಾಳದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿರುವ ಟಿಎಂಸಿ ಸರ್ಕಾರವನ್ನು ಶಿಕ್ಷಿಸಬೇಕಲ್ಲವೇ?’ ಎಂದು ಪ್ರಶ್ನಿಸಿದರು. ‌

ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದಾಗ ಮಾತ್ರ ಕೈಗಾರಿಕೆ ಮತ್ತು ಹೂಡಿಕೆ ರಾಜ್ಯಕ್ಕೆ ಬರುತ್ತದೆ. ಸಿಂಡಿಕೇಟ್ ತೆರಿಗೆ ಮತ್ತು ಮಾಫಿಯಾ ಆಡಳಿತವು ಬಿಜೆಪಿ ಆಡಳಿತದಲ್ಲಿ ಮಾತ್ರ ಕೊನೆಗೊಳ್ಳುತ್ತದೆ. ಇದು ನಾನು ನಿಮಗೆ ನೀಡುತ್ತಿರುವ ಭರವಸೆ ಎಂದು ಮೋದಿ ಹೇಳಿದ್ದಾರೆ.

ಟಿಎಂಸಿ ‘ಮಹಿಳೆಯರು, ಯುವಕರು ಮತ್ತು ರೈತರ ಶತ್ರು’ ಎಂದು ಆರೋಪಿಸಿದ ಮೋದಿ, ಇವರ ಆಡಳಿತದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ. ಬಂಗಾಳದ ಯುವಕರ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಲಾಗುತ್ತಿದೆ ಎಂದು ದೂರಿದರು.

‘ಮಹಿಳೆಯರು ಮತ್ತು ಯುವಕರು ಧ್ವನಿ ಎತ್ತಬೇಕು. ಟಿಎಂಸಿ ಆಳ್ವಿಕೆಯಲ್ಲಿ ಶಿಕ್ಷಣವು ಭ್ರಷ್ಟಾಚಾರದಿಂದ ಹಾಳಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ಮಾಫಿಯಾ ನಿಯಂತ್ರಿಸುತ್ತಿದೆ’ ಎಂದು ಅವರು ಆರೋಪಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ಕಾಲೇಜು ವಿದ್ಯಾರ್ಥಿಗಳ ಮೇಲಿನ ಅತ್ಯಾಚಾರ, ಹಿಂಸಾಚಾರ ನಿಲ್ಲುತ್ತದೆ. ಹಾಗೆಯೇ ಸಂದೇಶಖಾಲಿಯಂತಹ ಪ್ರಕರಣಗಳು ಮರುಕಳಿಸಿದಂತೆ ನೋಡಿಕೊಳ್ಳಲು, ಭ್ರಷ್ಟಾಚಾರ ಮುಕ್ತ ಶಿಕ್ಷಣ ಕ್ಷೇತ್ರವನ್ನು ರೂಪಿಸುವುದು ಹಾಗೂ ಇಂತಹ ಮತ್ತಷ್ಟು ಕಾರ್ಯಗಳು ಸಾಧ್ಯವಾಗುವುದು ನಮ್ಮ ಸರ್ಕಾರದಿಂದ ಮಾತ್ರ’ ಎಂದು ಮೋದಿ ಪ್ರತಿಪಾದಿಸಿದ್ದಾರೆ.

* ‘ಮಹಾ-ಜಂಗಲ್ ರಾಜ್ ಮತ್ತು ಉತ್ತಮ ಆಡಳಿತ’ದ ನಡುವಿನ ಸ್ಪರ್ಧೆ

* ಮತಕ್ಕಾಗಿ ನುಸುಳುಕೋರರ ರಕ್ಷಿಸುವ ಟಿಎಂಸಿ: ಆರೋಪ

* ಬಿಜೆಪಿ ಆಡಳಿತದಲ್ಲಿ ಮಾತ್ರ ವಿದ್ಯಾರ್ಥಿಗಳು, ನಾಗರಿಕರು ಸುರಕ್ಷಿ‌ತ: ಭರವಸೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.