ಮುಂಬೈ: ವಂಶವನ್ನು ಮುಂದುವರಿಸಲು ಮೃತ ಅವಿವಾಹಿತ ಮಗನ ಸಂರಕ್ಷಿಸಿರುವ ವೀರ್ಯಯನ್ನು ಫರ್ಟಿಲಿಟಿ ಕೇಂದ್ರದಿಂದ ಪಡೆಯಲು ಅಧಿಕಾರ ಕೋರಿ ತಾಯಿಯೊಬ್ಬರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿಯ ವಿಚಾರಣೆ ಮುಗಿಯುವವರೆಗೂ ವೀರ್ಯವನ್ನು ಹಾಳಾಗದಂತೆ ಹೆಪ್ಪುಗಟ್ಟಿದ ಮಾದರಿಯಲ್ಲಿ ಸಂರಕ್ಷಿಸಿಡುವಂತೆ ಕೋರ್ಟ್ ಆದೇಶಿಸಿದೆ.
ಕ್ಯಾನ್ಸರ್ ಪೀಡಿತ ಪುತ್ರ ಕಿಮೋಥೆರಪಿಗೆ ಹೋಗುವಾಗ ತನ್ನ ವೀರ್ಯವಿರುವ ದ್ರವವನ್ನು ಸಂಗ್ರಹಿಸಲು ಸೂಚಿಸಿದ್ದ. ಒಂದೊಮ್ಮೆ ತಾನು ಮರಣ ಹೊಂದಿದರೆ ಅದನ್ನು ನಾಶ ಮಾಡುವಂತೆಯೂ ನೀಡಿದ್ದನು ಫರ್ಟಿಲಿಟಿ ಕೇಂದ್ರವು ಹೇಳಿರುವುದಾಗಿ ವರದಿ ತಿಳಿಸಿದೆ. ಆದರೆ, ಈಗ ಮಗನ ವೀರ್ಯವನ್ನು ನೀಡುವಂತೆ ತಾಯಿ ಕೇಳಿದ್ದು, ಅದಕ್ಕೆ ಫರ್ಟಿಲಿಟಿ ಕೇಂದ್ರವು ನಿರಾಕರಿಸಿದ್ದು, ನ್ಯಾಯಾಲಯದಿಂದ ಅಧಿಕಾರ ಪಡೆಯುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ತಾಯಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅರ್ಜಿ ವಿಚಾರಣೆಗೆ ಅಂಗೀಕರಿಸಿದ ಕೋರ್ಟ್, ವಿಚಾರಣೆ ಮುಗಿಯುವವರೆಗೂ ವೀರ್ಯವನ್ನು ಹೆಪ್ಪಗಟ್ಟಿದ ಮಾದರಿಯಲ್ಲಿ ಸಂಗ್ರಹಿಸಿಡುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜೂನ್ 30ಕ್ಕೆ ನಿಗದಪಡಿಸಿದೆ.
2021ರ ಅಸಿಸ್ಟೆಟ್ ರಿಪ್ರೊಡಕ್ಟಿವ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವ್ಯಕ್ತಿಯ ಮರಣದ ನಂತರ ಅವರ ವೀರ್ಯವನ್ನು ಸಂರಕ್ಷಿಸಬೇಕು ಎಂಬುದರ ಕುರಿತು ಅರ್ಜಿದಾರರು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಪೀಠ ಹೇಳಿದೆ.
ಫೆಬ್ರುವರಿಯಲ್ಲಿ ಮರಣಹೊಂದಿದಾಗ ಆ ವ್ಯಕ್ತಿ ಅವಿವಾಹಿತನಾಗಿದ್ದ/ ಮಗ ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸದೆ, ಮರಣದ ಬಳಿಕ ಸಂರಕ್ಷಿಸದ ವೀರ್ಯವನ್ನು ನಾಶಮಾಡಲು ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದಾನೆ ಎಂದು ತಾಯಿ ವಾದಿಸಿರುವುದನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ.
ಮಗನ ಮರಣದ ನಂತರ, ಗುಜರಾತ್ ಮೂಲದ ಐವಿಎಫ್ ಕೇಂದ್ರಕ್ಕೆ ವೀರ್ಯವನ್ನು ವರ್ಗಾಯಿಸಲು ಮುಂಬೈ ಮೂಲದ ಫರ್ಟಿಲಿಟಿ ಕೇಂದ್ರಕ್ಕೆ ಮಹಿಳೆ ಕೋರಿದ್ದರು. ಆದರೆ, ಅವರ ಮನವಿ ತಳ್ಳಿಹಾಕಿದ ಫರ್ಟಿಲಿಟಿ ಕೇಂದ್ರವು ಅಸಿಸ್ಟೆಟ್ ರಿಪ್ರೊಡಕ್ಟಿವ್ ಟೆಕ್ನಾಲಜಿ(ಎಆರ್‌ಟಿ) ಚಿಕಿತ್ಸಾಲಯಗಳನ್ನು ನಿಯಂತ್ರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಜಾರಿಗೆ ತಂದಿರುವ ಹೊಸ ಕಾಯ್ದೆಯಡಿಯಲ್ಲಿ ನ್ಯಾಯಾಲಯದಿಂದ ಅನುಮತಿ ಪಡೆಯಲು ಸೂಚಿಸಿತ್ತು.
ಈ ಶಾಸನವು ನೈತಿಕ ಅಭ್ಯಾಸಗಳನ್ನು ಖಚಿತಪಡಿಸುವುದು, ದುರುಪಯೋಗವನ್ನು ತಡೆಗಟ್ಟುವುದು ಮತ್ತು ಎಆರ್‌ಟಿ ಸೇವೆಗಳನ್ನು ಬಯಸುವ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.