ADVERTISEMENT

ಮಧ್ಯಪ್ರದೇಶದ ಇಂದೋರ್‌ನಲ್ಲಿ ಪಾಕಿಸ್ತಾನದ 5,000 ನಿರಾಶ್ರಿತರಿಗೆ ಲಸಿಕೆ

ಪಿಟಿಐ
Published 13 ಜೂನ್ 2021, 13:51 IST
Last Updated 13 ಜೂನ್ 2021, 13:51 IST
ಗುವಾಹಟಿಯಲ್ಲಿ ಭಾನುವಾರ ಯುವತಿಯೊಬ್ಬರು ಲಸಿಕೆ ಪಡೆದರು. (ಪಿಟಿಐ)
ಗುವಾಹಟಿಯಲ್ಲಿ ಭಾನುವಾರ ಯುವತಿಯೊಬ್ಬರು ಲಸಿಕೆ ಪಡೆದರು. (ಪಿಟಿಐ)   

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ನಲ್ಲಿ ನೆಲೆಸಿರುವ ಹಿಂದೂ ಸಿಂಧಿ ಸಮುದಾಯದ ಸುಮಾರು 5,000 ಪಾಕಿಸ್ತಾನಿ ನಿರಾಶ್ರಿತರಿಗೆ ಕೋವಿಡ್‌ 19 ಲಸಿಕೆ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

‘ಲಸಿಕೆ ನೀಡುವಂತೆ ಪಾಕಿಸ್ತಾನಿ ಹಿಂದೂ ಸಿಂಧಿ ಸಮುದಾಯದ ಪ್ರತಿನಿಧಿಗಳು ಇತ್ತೀಚೆಗೆ ಮನವಿ ಮಾಡಿದ್ದರು. ಈಗ ಸರ್ಕಾರದ ಅನುಮೋದನೆ ಸಿಕ್ಕಿದ್ದು, ಶೀಘ್ರದಲ್ಲೇ ಲಸಿಕೆ ನೀಡಲಾಗುತ್ತದೆ,’ ಎಂದು ಜಿಲ್ಲಾ ಲಸಿಕಾ ಅಭಿಯಾನದ ಅಧಿಕಾರಿ ಡಾ.ಪ್ರವೀಣ್ ಜಾಡಿಯಾ ಪಿಟಿಐಗೆ ತಿಳಿಸಿದ್ದಾರೆ.

ಪಾಕಿಸ್ತಾನಿ ನಿರಾಶ್ರಿತರು ತಮ್ಮ ಪಾಸ್‌ಪೋರ್ಟ್‌ಗಳನ್ನು ಗುರುತಿನ ಚೀಟಿಯಾಗಿ ತೋರಿಸುವ ಮೂಲಕ ಲಸಿಕಾ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆಗಳನ್ನು ಪಡೆಯಬಹುದು ಎಂದು ಪ್ರವೀಣ್‌ ಹೇಳಿದ್ದಾರೆ.

ADVERTISEMENT

‘ಸುಮಾರು 5,000 ಪಾಕಿಸ್ತಾನಿ ನಿರಾಶ್ರಿತರು ಇಂದೋರ್‌ನಲ್ಲಿ ನೆಲೆಸಿದ್ದಾರೆ. ಅವರಲ್ಲಿ ಹೆಚ್ಚಿನವರು ನಗರದ ಸಿಂಧಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಸಿಂಧಿ ಸಮುದಾಯದ ಎಲ್ಲಾ ವಯಸ್ಕರಿಗೆ ಮಾನವೀಯತೆ ಆಧಾರದ ಮೇಲೆ ಕೋವಿಡ್‌ ಲಸಿಕೆ ನೀಡಲಾಗುತ್ತಿದೆ,’ ಎಂದು ಪ್ರವೀಣ್‌ ಜಾಡಿಯಾ ಹೇಳಿದರು.

ಕಳೆದ ತಿಂಗಳು, ಕಾರ್ಯನಿಮಿತ್ತ ಇಂದೋರ್‌ಗೆ ಬಂದಿದ್ದ ಡಚ್ ಪ್ರಜೆಗೆ ಲಸಿಕೆ ಹಾಕಿದ್ದೆವು ಎಂದೂ ಪ್ರವೀಣ್‌ ಇದೇ ವೇಳೆ ನೆನಪಿಸಿಕೊಂಡರು.

ಇಂದೋರ್‌ನಲ್ಲಿ ಈ ವರೆಗೆ 1.52 ಲಕ್ಷ ಕೋವಿಡ್‌ ಸೋಂಕು ಪ್ರಕರಣಗಳು ವರದಿಯಾಗಿದ್ದು, 1,370 ಮಂದಿ ಮೃತಪಟ್ಟಿದ್ದಾರೆ. ಇಂದೋರ್ ಜಿಲ್ಲೆಯಲ್ಲಿ ಸುಮಾರು 13.53 ಲಕ್ಷ ಜನರಿಗೆ ಲಸಿಕೆಯ ಮೊದಲ ಡೋಸ್‌ ನೀಡಲಾಗಿದ್ದು, 2.35 ಲಕ್ಷ ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.