ADVERTISEMENT

ಮಧ್ಯಪ್ರದೇಶ: ಬುಡಕಟ್ಟು ಮಹಿಳೆಗೆ ಚಪ್ಪಲಿ ಹಾರ ಹಾಕಿ, ಗಂಡನ ಹೊತ್ತು ಸಾಗುವ ಶಿಕ್ಷೆ

ಪಿಟಿಐ
Published 5 ಜುಲೈ 2022, 2:22 IST
Last Updated 5 ಜುಲೈ 2022, 2:22 IST
   

ದೆವಾಸ್‌ (ಮಧ್ಯಪ್ರದೇಶ): ಚಪ್ಲಲಿಯ ಹಾರ ಹಾಕಿಕೊಂಡು, ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತು ಸಾಗುವಂತೆ ಬುಡಕಟ್ಟು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿರುವ ಅಮಾನವೀಯ ಘಟನೆದೆವಾಸ್‌ ಜಿಲ್ಲೆಯಬೋರ್ಪದವ್ ಗ್ರಾಮದಲ್ಲಿ ಭಾನುವಾರ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ವೈರಲ್‌ ಆದ ಬಳಿಕ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಮಹಿಳೆಯು ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಆಕೆಯ ಪತಿಯೇ ಗ್ರಾಮಸ್ಥರ ಎದುರುಥಳಿಸಿದ್ದಾನೆ. ಅದಾದ ನಂತರ ಗ್ರಾಮಸ್ಥರು, ಚಪ್ಪಲಿಯ ಹಾರ ಹಾಕಿಸಿ, ಗಂಡನನ್ನು ಹೆಗಲ ಮೇಲೆ ಹೊತ್ತು ಸಾಗುವಂತೆ ಮಹಿಳೆಗೆ ಕಿರುಕುಳ ನೀಡಿದ್ದಾರೆ.

ಮಹಿಳೆಯು ಮೂರ್ನಾಲ್ಕು ದಿನಗಳಿಂದ ಕಾಣೆಯಾಗಿದ್ದರು. ನಂತರ ಸ್ನೇಹಿತನೊಂದಿಗೆ ಕಾಣಿಸಿಕೊಂಡಿದ್ದರು. ಇದು ಆಕೆಯ ಪತಿ ಹಾಗೂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯನ್ನು ಶಿಕ್ಷಿಸಬೇಕು ಎಂದು ಗ್ರಾಮಸ್ಥರು ಈ ರೀತಿ ಮಾಡಿದ್ದಾರೆ. ಘಟನೆ ಸಂಬಂಧ ಮಹಿಳೆಯ ಪತಿಯೂ ಸೇರಿದಂತೆ ಒಟ್ಟು 9 ಜನರನ್ನು ಬಂಧಿಸಲಾಗಿದೆ. ಅವರ ವಿರುದ್ಧ, ಹಲ್ಲೆ,ಹಿಂಸಾಚಾರ, ಮಹಿಳೆಯ ಮಾನಹಾನಿ ಮತ್ತು ಬೆದರಿಕೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆಎಂದುಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಈ ಕುರಿತು ಮಾತನಾಡಿರುವ ದೆವಾಸ್‌ನ ಹೆಚ್ಚುವರಿ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಸೂರ್ಯಕಾಂತ್‌ ಶರ್ಮಾ, 'ಮಹಿಳೆ ವಾರದ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಆಕೆಯ ಪತಿ ಉದಯ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಪತ್ನಿ ತನ್ನ ಆತ್ಮೀಯ ಸ್ನೇಹಿತ ಎಂದು ಹೇಳಿಕೊಂಡ ವ್ಯಕ್ತಿಯ ಮನೆಯಲ್ಲಿರುವುದು ನಂತರ ಗೊತ್ತಾಗಿತ್ತು. ಕೂಡಲೇ ಅಲ್ಲಿಗೆ ತೆರಳಿದ ಪತಿ, ಮಹಿಳೆಯನ್ನು ಹೊರಗೆಳೆದು ಗ್ರಾಮಸ್ಥರ ಮುಂದೆಯೇ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ' ಎಂದು ತಿಳಿಸಿದ್ದಾರೆ.

ನಂತರ ಮಹಿಳೆಯ ಸ್ನೇಹಿತ ಈ ಸಂಬಂಧ ದೂರು ದಾಖಲಿಸಿದ್ದಾರೆ. ವಿಚಾರಣೆ ವೇಳೆ ಮಹಿಳೆಯು, ತಮಗೆ 15 ವರ್ಷವಿದ್ದಾಗಲೇ ಮದುವೆ ಮಾಡಲಾಯಿತು. ಪತಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದುದರಿಂದ ಮನೆಬಿಟ್ಟು ಹೋದೆ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.