ADVERTISEMENT

ಗಂಡನ ಕೊಲೆಗೆ ಸುಪಾರಿ ಕೊಟ್ಟಿದ್ದಾಳೆ ಎಂಬುದಕ್ಕೆ ಸಾಕ್ಷಿ ಎಲ್ಲಿದೆ: ಸೋನಮ್‌ ತಂದೆ

ಪಿಟಿಐ
Published 9 ಜೂನ್ 2025, 5:41 IST
Last Updated 9 ಜೂನ್ 2025, 5:41 IST
   

ಇಂದೋರ್‌: ‘ನನ್ನ ಮಗಳು ನಿರಪರಾಧಿಯಾಗಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ರಾಜ ರಘುವಂಶಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪತ್ನಿ ಸೋನಮ್‌ ಅವರ ತಂದೆ ದೇವಿ ಸಿಂಗ್ ರಘುವಂಶಿ ಒತ್ತಾಯಿಸಿದ್ದಾರೆ.

ಮೇಘಾಲಯಕ್ಕೆ ಹನಿಮೂನ್‌ ತೆರಳಿದ ಸಂದರ್ಭ ರಾಜ ರಘುವಂಶಿ ಅವರ ಹತ್ಯೆಯಾಗಿದ್ದು, ಅವರ ಕೊಲೆಗೆ ಸ್ವತಃ ಪತ್ನಿ ಸೋನಮ್ ಅವರೇ ಸುಪಾರಿ ನೀಡಿದ್ದರು ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಹೊರಬಿದ್ದಿದೆ. ಪ್ರಕರಣ ಸಂಬಂಧ ಸೋನಮ್‌ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಗಳ ಬಂಧನವನ್ನು ಖಂಡಿಸಿರುವ ದೇವಿ ಸಿಂಗ್, ಪೊಲೀಸರ ವಾದವನ್ನು ಅಲ್ಲಗೆಳೆದಿದ್ದಾರೆ.

ADVERTISEMENT

‘ರಾಜ ರಘುವಂಶಿ ಕೊಲೆ ಪ್ರಕರಣದಿಂದಾಗಿ ರಾಜ್ಯ ಸರ್ಕಾರದ ವರ್ಚಸ್ಸು ಹಾಳಾಗುತ್ತಿರುವುದರಿಂದ ಮೇಘಾಲಯ ಪೊಲೀಸರು ನನ್ನ ಮಗಳ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ನನ್ನ ಮಗಳು ನಿರಪರಾಧಿ’ ಎಂದು ಹೇಳಿದ್ದಾರೆ.

‘ನನ್ನ ಮಗಳು ಅವಳ ಗಂಡನನ್ನು ಕೊಲ್ಲಲ್ಲು ಸುಪಾರಿ ನೀಡಿದ್ದಾಳೆ ಎಂಬುದಕ್ಕೆ ಮೇಘಾಲಯ ಪೊಲೀಸರ ಬಳಿ ಯಾವ ಸಾಕ್ಷಿಗಳಿವೆ’ ಎಂದು ಅವರು ಕೇಳಿದ್ದಾರೆ.

ಘಟನೆ ವಿವರ:

ಮೇ 11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಾಜ ರಘುವಂಶಿ ಮತ್ತು ಸೋನಮ್‌, ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು ದಂಪತಿ ಕಾಣೆಯಾಗಿದ್ದು, ಜೂನ್‌ 2ರಂದು ರಘುವಂಶಿ ಅವರ ಶವ ಜಲಪಾತದ ಕಮರಿಯಲ್ಲಿ ಸಿಕ್ಕಿತ್ತು.

ನಾಪತ್ತೆಯಾದ ಸೋನಮ್‌ಗಾಗಿ ಹುಡುಕಾಟ ನಡೆಸುತ್ತಿರುವಾಗಲೇ, ಉತ್ತರ ಪ್ರದೇಶ ಗಾಜಿಪುರದ ಪೊಲೀಸರ ಮುಂದೆ ಸೋಮವಾರ ಸೋನಮ್‌ ಶರಣಾಗಿದ್ದರು. ಏತನ್ಮಧ್ಯೆ, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ಪೊಲೀಸರು ತನಿಖೆ ನಡೆಸಿದ್ದರು.

ತನಿಖೆ ವೇಳೆ ಆರೋಪಿಗಳು ರಾಜ ರಘುವಂಶಿ ಅವರ ಕೊಲೆಗೆ ಸೋನಮ್‌ ಅವರೇ ಸುಪಾರಿ ನೀಡಿರುವುದಾಗಿ ಬಾಯ್ಬಿಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.