ಪ್ರಧಾನ ಮಂತ್ರಿ ಬಾಲ ಪುರಸ್ಕಾರ ಪುರಸ್ಕೃತರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು
ಕೃಪೆ: X / @rashtrapatibhvn
ನವದೆಹಲಿ: ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 20 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಶುಕ್ರವಾರ) ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್‌ಬಿಪಿ) ನೀಡಿ ಗೌರವಿಸಿದ್ದಾರೆ.
'ವೀರ ಬಾಲ ದಿವಸ'ದ (ಡಿ.26) ಅಂಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಾಧಕರನ್ನು ಅಭಿನಂದಿಸಿದ ಮುರ್ಮು, ಈ ಮಕ್ಕಳು ತಮ್ಮ ಕುಟುಂಬ, ಸಮುದಾಯ ಹಾಗೂ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಪುರಸ್ಕಾರವು ದೇಶದಾದ್ಯಂತ ಇರುವ ಎಲ್ಲ ಮಕ್ಕಳಿಗೂ ಸ್ಫೂರ್ತಿ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'ವೀರ ಬಾಲ ದಿವಸ'ದ ಕುರಿತು ಮಾತನಾಡಿದ ಮುರ್ಮು, ಸುಮಾರು 320 ವರ್ಷಗಳ ಹಿಂದೆಯೇ ಗುರು ಗೋವಿಂದ ಸಿಂಗ್ ಹಾಗೂ ಅವರ ಮಕ್ಕಳು ಸತ್ಯ ಮತ್ತು ನ್ಯಾಯ ಕಾಪಾಡುವ ಸಲುವಾಗಿ ಮಹಾನ್ ತ್ಯಾಗ ಮಾಡಿದ್ದರು ಎಂದು ಸ್ಮರಿಸಿದ್ದಾರೆ.
ಈ ಪುರಸ್ಕಾರವನ್ನು 5ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಈ ವರ್ಷ 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 20 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.
ಪುರಸ್ಕಾರವು ಪದಕ, ಪ್ರಮಾಣಪತ್ರ ಹಾಗೂ ₹ 1 ಲಕ್ಷ ನಗದನ್ನು ಒಳಗೊಂಡಿದೆ.
'ವೀರ ಬಾಲ ದಿವಸ'ದ ಹಿನ್ನೆಲೆ ಏನು?
10ನೇ ಸಿಖ್ ಧರ್ಮಗುರು ಗುರು ಗೋವಿಂದ ಸಿಂಗ್ ಅವರು ಮೊಘಲರ ಆಳ್ವಿಕೆ ವೇಳೆ ಸಿಖ್ ಸಮುದಾಯದ ಜನರನ್ನು ಧಾರ್ಮಿಕ ಕಿರುಕುಳದಿಂದ ರಕ್ಷಿಸುವ ಸಲುವಾಗಿ 1699ರಲ್ಲಿ ಖಾಲ್ಸಾ ಪಂಥ ಸ್ಥಾಪಿಸಿದ್ದರು.
ಖಾಲ್ಸಾದಲ್ಲಿ ಭಾಗವಹಿಸಿದ್ದ, ಗೋವಿಂದ ಸಿಂಗ್ ಅವರ ನಾಲ್ವರು ಮಕ್ಕಳನ್ನು ಮೊಘಲ್ ಸಾಮ್ರಾಟರು ಗಲ್ಲಿಗೇರಿಸಿದ್ದರು. ಆ ಮಕ್ಕಳ ಸ್ಮರಣಾರ್ಥವಾಗಿ ಡಿಸೆಂಬರ್ 26ರಂದು 'ವೀರ ಬಾಲ ದಿವಸ' ಎಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2022ರ ಜನವರಿ 9ರಂದು ಘೋಷಿಸಿದ್ದರು.
ಪುರಸ್ಕೃತರು
ಶೌರ್ಯ
ವ್ಯೋಮ ಪ್ರಿಯಾ (ಮರಣೋತ್ತರ) – ತಮಿಳುನಾಡು
ಕಮಲೇಶ್ ಕುಮಾರ್ (ಮರಣೋತ್ತರ) – ಬಿಹಾರ
ಮೊಹಮ್ಮದ್ ಸಿದಾನ್ (11 ವರ್ಷ) – ಕೇರಳ
ಅಜಯ್ ರಾಯ್ (9 ವರ್ಷ) – ಉತ್ತರ ಪ್ರದೇಶ
ಕಲೆ & ಸಂಸ್ಕೃತಿ
ಎಸ್ಥರ್ ಲಾಲ್ದುಹವ್ಮಿ ನಮ್ಟೆ (9 ವರ್ಷ) – ಮಿಜೋರಾಂ
ಸುಮನ್ ಸರ್ಕಾರ್ (16 ವರ್ಷ) – ಪಶ್ಚಿಮ ಬಂಗಾಳ
ಪರಿಸರ
ಪೂಜಾ (17 ವರ್ಷ) – ಉತ್ತರ ಪ್ರದೇಶ
ಸಮಾಜ ಸೇವೆ
ಶ್ರವಣ್ ಸಿಂಗ್ (10 ವರ್ಷ) – ಪಂಜಾಬ್
ವನ್ಶ್ ತಯಾಲ್ (17 ವರ್ಷ) – ಚಂಡೀಗಢ
ವಿಜ್ಞಾನ & ತಂತ್ರಜ್ಞಾನ
ಆಯಿಷಿ ಪ್ರಿಶಾ ಬೋರಾ (14 ವರ್ಷ) – ಅಸ್ಸಾಂ
ಆರ್ನವ್ ಅನುಪ್ರಿಯ ಮಹರ್ಷಿ (17 ವರ್ಷ) – ಮಹಾರಾಷ್ಟ್ರ
ಕ್ರೀಡಾ ವಿಭಾಗ
ಜ್ಯೋತಿ, ಪ್ಯಾರಾ ಅಥ್ಲೀಟ್ (17 ವರ್ಷ) – ಹರಿಯಾಣ
ಶಿವಾನಿ ಉಪ್ಪಾರ, ಪ್ಯಾರಾ ಅಥ್ಲೀಟ್ (17 ವರ್ಷ) – ಆಂಧ್ರ ಪ್ರದೇಶ
ಧಿನಿಧಿ ದೇಶಿಂಘು, ಈಜು (15 ವರ್ಷ) – ಕರ್ನಾಟಕ
ಅನುಷ್ಕಾ ಕುಮಾರಿ, ಫುಟ್‌ಬಾಲ್ (14 ವರ್ಷ) – ಜಾರ್ಖಂಡ್
ಯೋಗಿತಾ ಮಾಂಡವಿ, ಜೂಡೋ (14 ವರ್ಷ) – ಚತ್ತೀಸಗಢ
ಜೋಶ್ನಾ ಸಾಬರ್, ವೇಯ್ಟ್‌ಲಿಫ್ಟರ್ (16 ವರ್ಷ) – ಒಡಿಶಾ
ವಿ.ಎಲ್. ಪ್ರಗ್ನಿಕಾ, ಚೆಸ್ (7 ವರ್ಷ) – ಗುಜರಾತ್
ವಿಶ್ವನಾಥ್ ಪದಕಂತಿ, ಪರ್ವತಾರೋಹಿ (16 ವರ್ಷ) – ತೆಲಂಗಾಣ
ವೈಭವ್ ಸೂರ್ಯವಂಶ, ಕ್ರಿಕೆಟ್ (14 ವರ್ಷ) – ಬಿಹಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.