ಪ್ರಾತಿನಿಧಿಕ ಚಿತ್ರ
ಇಂದೋರ್: ಮತಾಂತರಕ್ಕೆ ಪಿತೂರಿ ಮಾಡಿದ ಆರೋಪ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಕಾಂಗ್ರೆಸ್ ನಾಯಕನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲು ಇಂದೋರ್ ಜಿಲ್ಲಾಡಳಿತ ಆದೇಶಿಸಿದೆ.
ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟುಮಾಡುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಪಡಿಸಲು ಉದ್ದೇಶಿಸಿದ ಆರೋಪದಲ್ಲಿ ಕಾಂಗ್ರೆಸ್ ಕೌನ್ಸಿಲರ್ ಅನ್ವರ್ ಖಾದ್ರಿ ಅವರನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ಸಿಂಗ್ ಆದೇಶಿಸಿದ್ದಾರೆ. ಅದರಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಖಾದ್ರಿ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಗಳಿವೆ. ಹಣದ ಆಮಿಷವೊಡ್ಡಿ ಜನರನ್ನು ಮತಾಂತರಗೊಳಿಸಲು ಸಂಚು ರೂಪಿಸಲು ಯತ್ನಿಸಿದ ಆರೋಪ ಪ್ರಕರಣ ಕಳೆದ ತಿಂಗಳು ದಾಖಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದು ಹಾಗೂ ಇತರ ಆರೋಪಗಳಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾಗಿರುವ ಸಾಹಿಲ್ ಶೇಖ್ ಮತ್ತು ಅಲ್ತಾಫ್ ಶಾ ಎಂಬ ಇಬ್ಬರು ಆರೋಪಿಗಳು, ಖಾದ್ರಿ ಪಾತ್ರದ ಬಗ್ಗೆ ಪೊಲೀಸರೆದುರು ಹೇಳಿಕೆ ನೀಡಿದ್ದರು.
ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ, ಅವರನ್ನು ಮತಾಂತರಗೊಳಿಸುವಂತೆ ಖಾದ್ರಿ ಅವರು ತಮಗೆ ₹ 3 ಲಕ್ಷ ನೀಡಿದ್ದರು ಎಂದು ತಪ್ಪೊಪ್ಪಿಕೊಂಡಿದ್ದರು. ಅವರ ಹೇಳಿಕೆಗಳ ಆಧಾರದಲ್ಲಿ ಖಾದ್ರಿ ವಿರುದ್ಧ ಮತಾಂತರಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿವೆ.
ಇದರ ಬೆನ್ನಲ್ಲೇ, ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಕಾಂಗ್ರೆಸ್ ಕೌನ್ಸಿಲರ್ 'ಲವ್ ಜಿಹಾದ್' ಗ್ಯಾಂಗ್ ಮುನ್ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.