ADVERTISEMENT

ಹಡಗಿನಲ್ಲಿ ಡ್ರಗ್ಸ್: ಎನ್‌ಸಿಬಿಯಿಂದ ಮತ್ತಿಬ್ಬರ ಬಂಧನ, ವಶದಲ್ಲಿ ಒಟ್ಟು 11 ಮಂದಿ

ಪಿಟಿಐ
Published 5 ಅಕ್ಟೋಬರ್ 2021, 5:10 IST
Last Updated 5 ಅಕ್ಟೋಬರ್ 2021, 5:10 IST
ಮುಂಬೈನ ಎನ್‌ಸಿಬಿ ಕಚೇರಿ ಸಮೀಪ ಎನ್‌ಸಿಬಿ ಪ್ರಾದೇಶಿಕ ನಿರ್ದೇಶಕ ಸಮೀರ್‌ ವಾಂಖೆಡೆ
ಮುಂಬೈನ ಎನ್‌ಸಿಬಿ ಕಚೇರಿ ಸಮೀಪ ಎನ್‌ಸಿಬಿ ಪ್ರಾದೇಶಿಕ ನಿರ್ದೇಶಕ ಸಮೀರ್‌ ವಾಂಖೆಡೆ   

ಮುಂಬೈ: ಇಲ್ಲಿನ ಕರಾವಳಿ ಭಾಗದಲ್ಲಿ ಕ್ರೂಸ್‌ ಶಿಪ್‌ನಲ್ಲಿ ನಡೆಸಲಾಗುತ್ತಿದ್ದ ಪಾರ್ಟಿಯಿಂದ ನಿಷೇಧಿತ ಡ್ರಗ್ಸ್‌ ಜಪ್ತಿ ಮಾಡಿರುವ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ), ಪ್ರಕರಣದ ಸಂಬಂಧ ಮತ್ತಿಬ್ಬರನ್ನು ಬಂಧಿಸಿರುವುದಾಗಿ ಮಂಗಳವಾರ ತಿಳಿಸಿದೆ.

ಈಗಾಗಲೇ ಬಾಲಿವುಡ್‌ನ ಸೂಪರ್‌ಸ್ಟಾರ್‌ ಶಾರೂಕ್‌ ಖಾನ್‌ ಮಗ ಆರ್ಯನ್ ಖಾನ್‌ ಸೇರಿದಂತೆ ಒಂಬತ್ತು ಜನರನ್ನು ಎನ್‌ಸಿಬಿ ಬಂಧಿಸಿದೆ. ಶನಿವಾರ ರಾತ್ರಿ ಎನ್‌ಸಿಬಿಯ ಮುಂಬೈ ಘಟಕವು ಗೋವಾದತ್ತ ಹೊರಟಿದ್ದ ಐಷಾರಾಮಿ ಹಡಗಿನ ಮೇಲೆ ದಾಳಿ ಮಾಡಿ, ಡ್ರಗ್ಸ್ ವಶ ಪಡಿಸಿಕೊಂಡಿತ್ತು ಹಾಗೂ ಡ್ರಗ್‌ ಪೆಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿರುವವರನ್ನು ಬಂಧಿಸಿದೆ.

ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದ ವೇಳೆ ಮತ್ತಿಬ್ಬರ ಕುರಿತು ಮಾಹಿತಿ ಹೊರಬಂದಿತ್ತು, ಅದನ್ನು ಆಧರಿಸಿ ಇಬ್ಬರನ್ನು ಬಂಧಿಸಲಾಗಿದೆ. ನಿಷೇಧಿತ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ಈವರೆಗೂ 11 ಜನರನ್ನು ಬಂಧಿಸಲಾಗಿದೆ.

ADVERTISEMENT

ಆರ್ಯನ್‌ ಖಾನ್‌ ಮತ್ತು ಇನ್ನಿಬ್ಬರ ವಾಟ್ಸ್‌ಆ್ಯಪ್‌ ಸಂದೇಶಗಳಲ್ಲಿ 'ಆಘಾತಕಾರಿ' ಮಾಹಿತಿ ಪತ್ತೆಯಾಗಿರುವುದಾಗಿ ಎನ್‌ಸಿಬಿ ಸೋಮವಾರ ಸಿಟಿ ಕೋರ್ಟ್‌ಗೆ ತಿಳಿಸಿತ್ತು. ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲದೊಂದಿಗೆ ಸಂಪರ್ಕ ಇರುವಂತೆ ತೋರಿರುವುದಾಗಿ ಎನ್‌ಸಿಬಿ ಹೇಳಿದೆ.

ಆರ್ಯನ್ ಖಾನ್ ಮತ್ತು ಇತರ ಎಂಟು ಆರೋಪಿಗಳನ್ನು ಅಕ್ಟೊಬರ್ 7ರವರೆಗೆ ವಶಕ್ಕೆ ಪಡೆದಿರುವ ಎನ್‌ಸಿಬಿ, ವಾಟ್ಸ್‌ಆ್ಯಪ್ ಚಾಟ್‌ಗಳಲ್ಲಿ ಮಾದಕವಸ್ತು ಖರೀದಿಗಾಗಿ ಪಾವತಿ ವಿಧಾನಗಳು, ಡ್ರಗ್ಸ್‌ಗೆ ಹಲವಾರು ಕೋಡ್ ಹೆಸರುಗಳನ್ನು ಬಳಸಿರುವುದಾಗಿ ತಿಳಿಸಿದೆ. ಆರ್ಯನ್ ಖಾನ್ ಅವರ ವಕೀಲರು ತಮ್ಮ ಕಕ್ಷಿದಾರನ ಬಳಿಯಿಂದ ಯಾವುದೇ ಮಾದಕ ದ್ರವ್ಯ ವಶಪಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.