ADVERTISEMENT

ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಕುರಿತ ಅಧ್ಯಾಯ: ಕ್ಷಮೆ ಕೋರಿದ ಎನ್‌ಸಿಇಆರ್‌ಟಿ

ಪಿಟಿಐ
Published 26 ಫೆಬ್ರುವರಿ 2026, 14:49 IST
Last Updated 26 ಫೆಬ್ರುವರಿ 2026, 14:49 IST
ಎನ್‌ಸಿಇಆರ್‌ಟಿ ಲಾಂಛನ
ಎನ್‌ಸಿಇಆರ್‌ಟಿ ಲಾಂಛನ   

ನವದೆಹಲಿ: 8ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ, ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಕುರಿತು ಅಧ್ಯಾಯವೊಂದನ್ನು ಪ್ರಕಟಿಸಿದ್ದಕ್ಕಾಗಿ ಎನ್‌ಸಿಇಆರ್‌ಟಿ ಬುಧವಾರ ಕ್ಷಮೆ ಕೋರಿದೆ.

‘ಪಠ್ಯಪುಸ್ತಕಗಳ ಪರಿಶೀಲನಾ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಈ ವಿಚಾರದಲ್ಲಿ ರಚನಾತ್ಮಕ ಪ್ರತಿಕ್ರಿಯೆಗಳನ್ನು ಎನ್‌ಸಿಇಆರ್‌ಟಿ ಮುಕ್ತವಾಗಿ ಸ್ವಾಗತಿಸುತ್ತದೆ. ವ್ಯಾಪಕ ಸಮಾಲೋಚನೆಗಳ ಬಳಿಕ ಪಠ್ಯಪುಸ್ತಕವನ್ನು ಮರುರಚಿಸಿ, 2026–27ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದೆ.

‘ಕಣ್ತಪ್ಪಿನಿಂದಾಗಿ, ಈ ಅಧ್ಯಾಯದಲ್ಲಿ ಕೆಲ ಅಸಮರ್ಪಕ ಸಂಗತಿಗಳು ಹಾಗೂ ದೋಷಗಳು ನುಸುಳಿರುವುದು ಕಂಡುಬಂದಿದೆ’ ಎಂದು ಪರಿಷತ್ತಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

‘ಸಂವಿಧಾನ ಕುರಿತ ಅರಿವನ್ನು ಹೆಚ್ಚಿಸುವುದು, ಪ್ರಜಾತಾಂತ್ರಿಕ ಭಾಗೀದಾರಿಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸುವುದೇ ಹೊಸ ಪುಸ್ತಕಗಳ ಉದ್ದೇಶವಾಗಿದೆ. ನ್ಯಾಯಾಂಗ ಸೇರಿದಂತೆ ಯಾವುದೇ ಸಾಂವಿಧಾನಿಕ ಸಂಸ್ಥೆಯ ಅಧಿಕಾರವನ್ನು ಪ್ರಶ್ನಿಸುವುದಾಗಲಿ ಅಥವಾ ಅವಹೇಳನ ಮಾಡುವುದಾಗಲಿ ಪರಿಷತ್ತಿನ ಉದ್ದೇಶವಲ್ಲ’ ಎಂದೂ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.