ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸಂಸದರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.
–ಪಿಟಿಐ ಚಿತ್ರ
ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ‘ಮತ ಕಳ್ಳತನ’ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಮತ್ತು ಸಂಸದರು ಸಂಸತ್ತಿನಿಂದ ಚುನಾವಣಾ ಆಯೋಗದ ಕಚೇರಿವರೆಗೆ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಎಲ್ಲ ಸಂಸದರು, ಕೂಟದ ಎಲ್ಲ ಪಕ್ಷಗಳ ಸದನ ನಾಯಕರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಬೆಳಿಗ್ಗೆ 11.30ಕ್ಕೆ ಮೆರವಣಿಗೆ ಆರಂಭವಾಗಿತ್ತು.
ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಆಯುಕ್ತರ ಭೇಟಿಗಾಗಿ ವಿರೋಧ ಪಕ್ಷದ ನಾಯಕರು ಸಮಯ ಕೇಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
‘ಮತಕಳ್ಳತನ’ದ ವಿಚಾರಗಳು ಚರ್ಚೆಯಾಗುತ್ತಿರುವ ಈ ಹೊತ್ತಿನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಇಂಡಿಯಾ’ ಮೈತ್ರಿಕೂಟದ ಎಲ್ಲ ನಾಯಕರಿಗೆ ಇಂದು (ಸೋಮವಾರ) ರಾತ್ರಿ ಔತಣಕೂಟ ಏರ್ಪಡಿಸಿದ್ದಾರೆ.
ಕಲಾಪ ಮುಂದೂಡಿಕೆ
‘ಮತ ಕಳ್ಳತನ’ ಹಾಗೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ಪ್ರತಿಭಟಿಸಿದ್ದರಿಂದ, ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.