ವೀರೇಂದ್ರ ಸಚ್‌ದೇವ
ಚಿತ್ರ ಕೃಪೆ: ಎಕ್ಸ್ @Virend_sachdeva
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ 2026ರ ಜನವರಿ ವೇಳೆಗೆ ನೆಹರೂ ಕ್ಯಾಂಪ್ ಅನ್ನು ಉತ್ತಮ ನೈರ್ಮಲ್ಯದೊಂದಿಗೆ ಮಾದರಿ ಬಡಾವಣೆಯಾಗಿ ಪರಿವರ್ತಿಸಲಿದೆ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಹೇಳಿದ್ದಾರೆ.
ತಮ್ಮ ಜನ್ಮದಿನದಂದು ಬಿಜೆಪಿಯ ಪ್ರಚಾರದ ಭಾಗವಾಗಿ ಪಟ್ಪರ್‌ಗಂಜ್ ಕ್ಷೇತ್ರದ ನೆಹರೂ ಕ್ಯಾಂಪ್‌ಗೆ ಸಚ್‌ದೇವ ಭೇಟಿ ನೀಡಿದ್ದರು.
ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಸಚ್‌ದೇವ, ‘ಎಎಪಿ ಸರ್ಕಾರ ಮತ್ತು ಅದರ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ತಮ್ಮ ಆಡಳಿತದಲ್ಲಿ ಕೊಳೆಗೇರಿ ನಿವಾಸಿಗಳ ಸಂಕಷ್ಟವನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ನರೇಲಾ ಮುಂತಾದ ಪ್ರದೇಶಗಳಲ್ಲಿ ಕೊಳೆಗೇರಿ ನಿವಾಸಿಗಳಿಗೆ ರಾಜೀವ್ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಲಾದ 50,000ಕ್ಕೂ ಹೆಚ್ಚು ಮನೆಗಳು ಶಿಥಿಲಾವಸ್ಥೆಯಲ್ಲಿವೆ’ ಎಂದು ಅವರು ಆರೋಪಿಸಿದ್ದಾರೆ.
‘10 ವರ್ಷಗಳಿಂದ ಅಧಿಕಾರದಲ್ಲಿದ್ದರೂ, ಅರವಿಂದ ಕೇಜ್ರಿವಾಲ್ ಅವರು ಸ್ಲಂ ಕ್ಲಸ್ಟರ್‌ಗಳನ್ನು ಮಾದರಿ ಬಡಾವಣೆಗಳಾಗಿ ಪರಿವರ್ತಿಸಲು ಮತ್ತು ನಿವಾಸಿಗಳ ಜೀವನ ಮಟ್ಟ ಸುಧಾರಿಸಲು ಒಂದೇ ಒಂದು ಉಪಕ್ರಮವನ್ನು ತೆಗೆದುಕೊಳ್ಳದಿರುವುದು ವಿಪರ್ಯಾಸ. ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯ ಪ್ರತಿಯೊಬ್ಬ ನಿರಾಶ್ರಿತರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು’ ಎಂದು ಸಚ್‌ದೇವ ಹೇಳಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯ ಎಲ್ಲಾ ಕೊಳೆಗೇರಿ ಪ್ರದೇಶಗಳನ್ನು ನೆಲಸಮ ಮಾಡುತ್ತದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆ.5ರಂದು ಚುನಾವಣೆ ನಡೆಯಲಿದ್ದು, ಫೆ.8ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.