ನೇಪಾಳದ ಸೈಕಲ್ ಸವಾರ
ಚಿತ್ರ ಕೃಪೆ: ಎಕ್ಸ್
ರಾಂಬನ್: ‘ಕಾಶ್ಮೀರಕ್ಕೆ ಪ್ರವೇಶಿಸುತ್ತಿದ್ದಂತೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಇದ್ದ ಭಯ ಮರೆಯಾಯಿತು ಎಂದು ನೇಪಾಳದ ಸೈಕ್ಲಿಸ್ಟ್ ಸಚಿನ್ ಚೌಧರಿ ಹೇಳಿದ್ದಾರೆ.
ನೇಪಾಳ ಮೂಲದ ಸಚಿನ್ ‘ಹಸಿರು ಉಳಿಸಿ, ನೀರು ಉಳಿಸಿ’ ಸಂದೇಶ ಸಾರಲು ಸೈಕಲ್ ಮೂಲಕ ಪ್ರಪಂಚ ಪರ್ಯಟನೆ ಕೈಗೊಂಡಿದ್ದಾರೆ. ತಮ್ಮ ಪ್ರಯಾಣದಲ್ಲಿ ಕಾಶ್ಮೀರಕ್ಕೆ ಬಂದಿದ್ದ ಸಚಿನ್ ಪಹಲ್ಗಾಮ್‌ನ ರೆಸಾರ್ಟ್‌ವೊಂದರಲ್ಲಿ ತಂಗಿದ್ದರು.
ಈ ಕುರಿತು ಪಿಟಿಐ ಜತೆ ಮಾತನಾಡಿರುವ ಅವರು, ‘ಪಹಲ್ಗಾಮ್ ದಾಳಿಯ ಬಳಿಕ ಕಾಶ್ಮೀರಕ್ಕೆ ಬರಲು ಅನುಮಾನ ಕಾಡಿತ್ತು. ಆದರೆ ಕಾಶ್ಮೀರ ಪ್ರವೇಶಿಸಿದಾಗ ಭಯ ಕಾಡಲೇ ಇಲ್ಲ. ಇಲ್ಲಿನ ಜನರ ಪ್ರೋತ್ಸಾಹ, ಪ್ರಶಾಂತ ಜಾಗ, ಜನರ ಪ್ರೀತಿ ನನ್ನಲ್ಲಿ ಸುರಕ್ಷಿತ ಭಾವ ಮೂಡುವಂತೆ ಮಾಡಿತು’ ಎಂದಿದ್ದಾರೆ.
‘ಅಮರನಾಥ ಗುಹೆಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ನಾನು ಪಹಲ್ಗಾಮ್‌ಗೆ ಭೇಟಿ ನೀಡಿದ್ದೆ, ಆದರೆ ವಿದೇಶಿ ಪ್ರಜೆಗಳ ಯಾತ್ರೆಗೆ ವಿದೇಶಾಂಗ ಸಚಿವಾಲಯದಿಂದ ಅನುಮತಿ ಅಗತ್ಯವಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವಕಾಶ ನೀಡಲಿಲ್ಲ. ಮುಂದಿನ ವರ್ಷ ಖಂಡಿತವಾಗಿ ಶಿವನ ದರ್ಶನ ಪಡೆದು ಆಸೆಯನ್ನು ಪೂರೈಸಿಕೊಳ್ಳುತ್ತೇನೆ. ಜಮ್ಮು ಮತ್ತು ಕಾಶ್ಮೀರದ ಹಣ, ಆಹಾರ, ವಸತಿ ನೀಡಿ ಸಹಾಯ ಮಾಡಿದ್ದಾರೆ. ರಾತ್ರಿ ಸಮಯದಲ್ಲಿ ದೇವಾಲಯ, ಗುರುದ್ವಾರಗಳಲ್ಲಿ ಸಮಯ ಕಳೆಯುತ್ತಿದ್ದೇನೆ’ ಎಂದು ಸಚಿನ್ ಹೇಳಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್ ಬೈಸರನ್ ಹುಲ್ಲುಗಾವಲಿನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ನೇಪಾಳ ಪ್ರಜೆ ಸೇರಿ 26 ಮಂದಿ ಮೃತಪಟ್ಟಿದ್ದರು. ಇದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಹೀಗಾಗಿ ಕಾಶ್ಮೀರದಲ್ಲಿ ಕೆಲ ದಿನಗಳ ಕಾಲ ಪ್ರವಾಸಿಗರ ಭೇಟಿ ಕಡಿಮೆಯಾಗಿತ್ತು. ಭದ್ರತಾ ಪಡೆ, ಕಾಶ್ಮೀರ ಆಡಳಿತ ಕೈಗೊಂಡ ಭದ್ರತಾ ಕ್ರಮಗಳಿಂದಾಗಿ ಕಣಿವೆ ರಾಜ್ಯದಲ್ಲಿ ಗಣನೀಯವಾಗಿ ಪ್ರವಾಸೋಧ್ಯಮ ಚೇತರಿಕೆ ಕಾಣುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.