ಬೆಂಜಮಿನ್ ನೆತನ್ಯಾಹು, ಪ್ರಿಯಾಂಕಾ ಗಾಂಧಿ ವಾದ್ರಾ
(ರಾಯಿಟರ್ಸ್, ಪಿಟಿಐ ಚಿತ್ರ)
ನವದೆಹಲಿ: ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತೀವ್ರವಾಗಿ ಖಂಡಿಸಿದ್ದಾರೆ.
ಅಮೆರಿಕದ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಗಾಜಾ ಮೇವಿನ ದಾಳಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಮರ್ಥಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಗಾಜಾದಲ್ಲಿ ನರಹತ್ಯೆ ಹಾಗೂ ಅಮಾಯಕರ ಮೇಲಿನ ಬರ್ಬರ ದಾಳಿಯನ್ನು ಪ್ರಿಯಾಂಕಾ ಟೀಕಿಸಿದ್ದಾರೆ.
ಗಾಜಾದಲ್ಲಿ ಮಕ್ಕಳು, ಮಹಿಳೆಯರು, ಅಮಾಯಕರು ಸೇರಿದಂತೆ ಸಾವಿರಾರು ಮಂದಿ ದಿನನಿತ್ಯ ಸಾವಿಗೀಡಾಗುತ್ತಿದ್ದಾರೆ. ಅವರ ಪರವಾಗಿ ಧ್ವನಿ ಎತ್ತಿದರಷ್ಟೇ ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
'ಇಸ್ರೇಲ್ ದಾಳಿಯನ್ನು ಜಗತ್ತಿನ ಪ್ರತಿಯೊಂದು ರಾಷ್ಟ್ರವೂ ಖಂಡಿಸಬೇಕು. ಅಲ್ಲದೆ ದಾಳಿಯನ್ನು ನಿಲ್ಲಿಸುವಂತೆ ಒತ್ತಡವನ್ನು ಹೇರಬೇಕು. ದ್ವೇಷ ಹಾಗೂ ಹಿಂಸಾಚಾರದಲ್ಲಿ ನಂಬಿಕೆ ಇರಿಸದೇ ಸರಿಯಾಗಿ ಯೋಚಿಸುವ ಇಸ್ರೇಲ್‌ನ ಸೇರಿದಂತೆ ಪ್ರತಿಯೊಬ್ಬ ಪ್ರಜೆಯ ನೈತಿಕ ಜವಾಬ್ದಾರಿಯೂ ಆಗಿದೆ' ಎಂದು ಅವರು ತಿಳಿಸಿದ್ದಾರೆ.
'ನಾಗರಿಕತೆ ಮತ್ತು ನೈತಿಕತೆಯ ಜಗತ್ತಿನಲ್ಲಿ ನೆತನ್ಯಾಹು ಕ್ರೂರ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ಖಂಡಿಸುವ ಬದಲು ನೆತನ್ಯಾಹು ಭಾಷಣಕ್ಕೆ ಅಮೆರಿಕದ ಸಂಸತ್ತಿನಲ್ಲಿ ಎದ್ದು ನಿಲ್ಲುವ ಮೂಲಕ ಚಪ್ಪಾಳೆ ತಟ್ಟುತ್ತಿದ್ದಾರೆ' ಎಂದು ಅವರು ಹೇಳಿದ್ದಾರೆ.
'ಇದು ಬರ್ಬರತೆ ಹಾಗೂ ನಾಗರಕತೆಯ ನಡುವಣ ಘರ್ಷಣೆ ಎಂದು ನೆತನ್ಯಾಹು ಹೇಳುತ್ತಾರೆ. ಹೌದು, ಅವರು ಹೇಳುತ್ತಿರುವುದು ನಿಜ. ನೆತನ್ಯಾಹು ಮತ್ತು ಅವರ ಸರ್ಕಾರದ ಬರ್ಬರತೆಗೆ ಹೆಚ್ಚಿನ ಪಾಶ್ಚಿಮಾತ್ಯ ರಾಷ್ಟ್ರಗಳು ಬೆಂಬಲ ನೀಡುತ್ತಿವೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.