ಎನ್‌ಐಎ
(ಪಿಟಿಐ ಸಂಗ್ರಹ ಚಿತ್ರ)
ನವದೆಹಲಿ: ಭಯೋತ್ಪಾದಕ ಸಂಘಟನೆ ಐಎಸ್‌ಗೆ (ಐಸಿಸ್) ಸಹಕಾರ ನೀಡಿದ್ದರು ಎನ್ನಲಾದ ಇಬ್ಬರು ಶಂಕಿತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.
ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡಯಾಪರ್ ವಾಲ ಮತ್ತು ತಲ್ಹಾ ಖಾನ್ ಬಂಧಿತರು. 2023ರಿಂದಲೂ ಈ ಇಬ್ಬರು ತಲೆಮರೆಸಿಕೊಂಡಿದ್ದರು. ಇಬ್ಬರ ವಿರುದ್ಧ ಮುಂಬೈನ ಎನ್‌ಐಎ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಇವರ ಬಗ್ಗೆ ಮಾಹಿತಿ ಕೊಟ್ಟವರಿಗೆ ₹3 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಕಚ್ಚಾ ಬಾಂಬ್ ತಯಾರಿಸಿ ಪರೀಕ್ಷೆ ನಡೆಸಿದ್ದ 2023ರ ಪ್ರಕರಣದಲ್ಲಿ ಇಬ್ಬರೂ ಪೊಲೀಸರಿಗೆ ಬೇಕಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಇಂಡೋನೇಷ್ಯಾದ ಜಕಾರ್ತದಿಂದ ಇಬ್ಬರೂ ಮುಂಬೈ ವಿಮಾನ ನಿಲ್ದಾಣ ಮೂಲಕ ಭಾರತಕ್ಕೆ ವಾಪಸಾಗುತ್ತಿದ್ದರು. ಎರಡನೇ ಟರ್ಮಿನಲ್‌ನಲ್ಲಿ ವಲಸೆ ವಿಭಾಗದ ಅಧಿಕಾರಿಗಳ ತಪಾಸಣೆ ವೇಳೆ ಮರೆಮಾಚಿಕೊಂಡು ಹೋಗಲು ಯತ್ನಿಸಿದಾಗ ವಶಕ್ಕೆ ಪಡೆಯಲಾಯಿತು ಎಂದು ಎನ್‌ಐಎ ತಿಳಿಸಿದೆ.
ಪುಣೆಯಲ್ಲಿ ಇಸ್ಲಾಮಿಕ್ ಸ್ಟೇಟ್‌ಗೆ ಸಹಕರಿಸಿದ್ದ 10 ಮಂದಿ ವಿರುದ್ಧ ಎನ್‌ಐಎ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. 8 ಮಂದಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಹಿಂಸಾಚಾರ ಮತ್ತು ಭಯೋತ್ಪಾದಕ ಕೃತ್ಯ ನಡೆಸಿ ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಈ ತಂಡ ಸಂಚು ರೂಪಿಸಿತ್ತು. 2022–23ರಲ್ಲಿ ಬಾಡಿಗೆ ಮನೆ ಪಡೆದಿದ್ದ ಶಂಕಿತರು ಬಾಂಬ್ ತಯಾರಿ ಮತ್ತು ತರಬೇತಿ ಕಾರ್ಯಾಗಾರ ಆಯೋಜನೆ ಮಾಡಿದ್ದರು. ಕಚ್ಚಾ ಬಾಂಬ್ ಸ್ಫೋಟ ಪ್ರಯೋಗವನ್ನೂ ನಡೆಸಿದ್ದರು ಎಂದು ಎನ್‌ಐಎ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.