ADVERTISEMENT

ತೆಲಂಗಾಣ: ಒಂದೇ ಕುಟುಂಬದ ಆರು ಜನ ಸೇರಿ ಬಾವಿಯೊಂದರಲ್ಲಿ 9 ಜನರ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 23 ಮೇ 2020, 13:00 IST
Last Updated 23 ಮೇ 2020, 13:00 IST
ತೆಲಂಗಾಣದ ವರಂಗಲ್‌ನ ಬಾವಿಯೊಂದರಲ್ಲಿ ಪತ್ತೆಯಾದ ಮೃತದೇಹಗಳು
ತೆಲಂಗಾಣದ ವರಂಗಲ್‌ನ ಬಾವಿಯೊಂದರಲ್ಲಿ ಪತ್ತೆಯಾದ ಮೃತದೇಹಗಳು   

ಹೈದರಾಬಾದ್‌: ಆಘಾತಕಾರಿ ಘಟನೆಯೊಂದರಲ್ಲಿ, ತೆಲಂಗಾಣದ ವಾರಂಗಲ್ ಜಿಲ್ಲೆಯ ಬಾವಿಯಲ್ಲಿ ಎಂಟು ವಲಸೆ ಕಾರ್ಮಿಕರು ಸೇರಿದಂತೆ 9 ಮಂದಿಯ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರಂಗಲ್ ಜಿಲ್ಲೆಯ ಗೊರ್ರೆಗುಂಟಾ ಗ್ರಾಮದಲ್ಲಿ ಬಾವಿಯಿಂದ ಗುರುವಾರ ನಾಲ್ಕು ಶವಗಳನ್ನು ಹೊರತೆಗೆಯಲಾಗಿದ್ದು, ಶುಕ್ರವಾರ ಮತ್ತೆ 5 ದೇಹಗಳನ್ನು ಹೊರತೆಗೆದಿದ್ದಾರೆ. ಈ ಮೂಲಕ ಒಟ್ಟು 9 ಶವಗಳನ್ನು ಹೊರತೆಗೆಯಲಾಗಿದೆ. ಮೃತ ಕಾರ್ಮಿಕರ ಪೈಕಿ ಪಶ್ಚಿಮ ಬಂಗಾಳದ ವಲಸೆ ಕುಟುಂಬದ ಆರು ಸದಸ್ಯರು ಮತ್ತು ಬಿಹಾರದ ಇಬ್ಬರು ಕಾರ್ಮಿಕರು ಮತ್ತು ಸ್ಥಳೀಯ ನಿವಾಸಿಯೂ ಸೇರಿದ್ದಾರೆ.

ಮೃತರನ್ನು ವಾರಂಗಲ್‌ನಲ್ಲಿ ಕೆಲಸ ಮಾಡುತ್ತಿದ್ದ 56 ವರ್ಷದ ಮೊಹಮ್ಮದ್ ಮಕ್ಸೂದ್, ಅವರ ಪತ್ನಿ ನಿಶಾ (48 ವರ್ಷ) ಪುತ್ರಿ ಬುಶ್ರಾ (24 ವರ್ಷ) ಮತ್ತು ಮಕ್ಸೂದ್ ಅವರ 3 ವರ್ಷದ ಮೊಮ್ಮಗ ಎಂದು ಗುರುತಿಸಲಾಗಿದೆ. ಬಳಿಕ ಮಕ್ಸೂದ್ ಅವರ ಪುತ್ರ, ಇಬ್ಬರು ಬಿಹಾರದವರು ಮತ್ತು ಸ್ಥಳೀಯ ನಿವಾಸಿಯ ಮೃತದೇಹವನ್ನು ಹೊರತೆಗೆಯಲಾಗಿದೆ.

ADVERTISEMENT

ಇದು ಸಾಮೂಹಿಕ ಆತ್ಮಹತ್ಯೆಯೊ ಅಥವಾ ಕೊಲೆ ಪ್ರಕರಣವೊ ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾರಂಗಲ್‌ ಪೊಲೀಸ್ ಆಯುಕ್ತ ವಿ ರವಿಂದರ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ನಿಯೋಜಿಸಲಾಗಿದ್ದು, ಮೃತ ದೇಹಗಳ ಮೇಲೆ ಯಾವುದೇ ಗಾಯಗಳಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಸದ್ಯ ಎಲ್ಲ ಆಯಾಮಗಳಲ್ಲಿಯೂ ತನಿಖೆಯನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಗೀಸುಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮಹಾತ್ಮಾ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಂಡಗಳು ಆಗಮಿಸಿ ಪರಿಶೀಲನೆ ನಡೆಸಿವೆ.

ಕಳೆದ 20 ವರ್ಷಗಳಿಂದಲೂ ಮಕ್ಸೂದ್ ವಾರಂಗಲ್ ನಗರದ ಕರೀಂಬಾದ್‌ನಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಆದರೆ ಲಾಕ್‌ಡೌನ್ ಪರಿಣಾಮದಿಂದಾಗಿ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲೀಕ ಆಶ್ರಯ ನೀಡಿದ್ದರಿಂದಾಗಿ ಅವರ ಗೋಡೌನ್‌ನಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಇದೀಗ ಇದೇ ಗೋಡೌನ್ ಬಳಿಯ ಬಾವಿಯಲ್ಲಿ ಮೃತ ದೇಹಗಳು ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.