ಪುಣೆ: ಅನಿಯಂತ್ರಿತ ಮಹಾತ್ವಾಕಾಂಕ್ಷೆಯೇ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.
ಪುಣೆಯಲ್ಲಿ ಎಂಐಟಿ ಸಮೂಹ ಸಂಸ್ಥೆ ನಿರ್ಮಿಸಿರುವ 'ಶ್ರೀ ಸರಸ್ವತಿ ಕರಾಡ್ ಆಸ್ಪತ್ರೆ' ಉದ್ಘಾಟಿಸಿ ಮಾತನಾಡಿರುವ ಅವರು, ಭಾರತವು ಶಾಂತಿ ಹಾಗೂ ಮಾನವತೆಯ ಸಂದೇಶವನ್ನು ಜಗತ್ತಿಗೆ ಸಾರುವ ಅಗತ್ಯವಿದೆ ಎಂದಿದ್ದಾರೆ.
'ನಮ್ಮ ದೇಶದ ಪರಂಪರೆ, ಸಂಸ್ಕೃತಿ ಹಾಗೂ ಇತಿಹಾಸವು ಎಷ್ಟು ಸಂಪದ್ಭರಿತವಾಗಿದೆ ಎಂದರೆ, ಸರ್ವಾಧಿಕಾರಿ ಹಾಗೂ ವಿಸ್ತರಣಾವಾದಿ ಮನಸ್ಥಿತಿಯನ್ನು ನಾವು ಎಂದೂ ಹೊಂದಲೇ ಇಲ್ಲ. ಆದಾಗ್ಯೂ, ಜಗತ್ತಿನಾದ್ಯಂತ ಸಂಘರ್ಷ ಉಂಟುಮಾಡುವಂತಹ ಅನಿಯಂತ್ರಿತವಾದ ಮಹತ್ವಾಕಾಂಕ್ಷೆ ಇದೆ. ಜಾಗತಿಕ ಶಾಂತಿ ಹಾಗೂ ಮಾನವತೆಯ ಸಂದೇಶವನ್ನು ವಿಶ್ವಕ್ಕೆ ಸಾರುವ ಅನಿವಾರ್ಯತೆ ಎದುರಾಗಿದೆ' ಎಂದು ಪ್ರತಿಪಾದಿಸಿದ್ದಾರೆ.
'ಭಾರತವು ವಿಶ್ವಗುರು ಆಗಬೇಕು' ಎಂದು ಒತ್ತಿಹೇಳಿದ ಸಚಿವ, 'ನಮ್ಮ ನೀತಿಶಾಸ್ತ್ರವು 'ನಮ್ಮ ಕಲ್ಯಾಣ' ಅಥವಾ 'ನಮ್ಮ ಕುಟುಂಬದ ಕಲ್ಯಾಣ'ದ ಬಗ್ಗೆ ಬೋಧಿಸುವುದಿಲ್ಲ. ಬದಲಾಗಿ, ಜಾಗತಿಕ ಸಮೃದ್ಧಿಯನ್ನು ಸಾರುತ್ತದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.