
ನಿತೀಶ್ ಕುಮಾರ್
ಪಟ್ನಾ: ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಯಲ್ಲಿದೆ. ಬಿಹಾರಿಯಾಗಿರುವುದು ರಾಜ್ಯದ ಜನರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಿಎಂ ನಿತೀಶ್ ಕುಮಾರ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 2005ಕ್ಕಿಂತ ಮೊದಲು ರಾಜ್ಯದಲ್ಲಿ ಅಪರಾಧ ಕೃತ್ಯಗಳು ಹಾಗೂ ಭ್ರಷ್ಟಾಚಾರ ಉತ್ತುಂಗದಲ್ಲಿತ್ತು. 2005ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿ ಜಾರಿಯಲ್ಲಿದೆ. ರಾಜ್ಯದಲ್ಲಿ ಭಯದ ವಾತಾವರಣವಿಲ್ಲ. 'ಇದೀಗ ಬಿಹಾರಿಯಾಗಿರುವುದು ರಾಜ್ಯದ ಜನರಿಗೆ ಹೆಮ್ಮೆಯ ವಿಷಯವಾಗಿದೆ' ಎಂದು ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟವನ್ನು ಟೀಕಿಸಿದ ನಿತೀಶ್, ಈ ಹಿಂದಿನ ಸರ್ಕಾರದಲ್ಲಿ ಮಹಿಳೆಯರು ಸಂಜೆ ಮೇಲೆ ಹೊರಗೆ ಬರುತ್ತಿರಲಿಲ್ಲ. ಅಪಹರಣ, ಅತ್ಯಾಚಾರ ಸೇರಿದಂತೆ ಅಪರಾಧ ಕೃತ್ಯಗಳು ಹೆಚ್ಚಾಗಿದ್ದವು ಎಂದು ಕಿಡಿಕಾರಿದ್ದಾರೆ.
ಹಿಂದಿನ ಸರ್ಕಾರದ ಆಳ್ವಿಕೆಯಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು. ಸುಲಿಗೆಕೋರರ ಭಯದಿಂದಾಗಿ ಹಣವಿದ್ದವರು ಸಹ ಉದ್ಯಮಗಳನ್ನು ನಡೆಸುತ್ತಿರಲಿಲ್ಲ, ಕೈಗಾರಿಕೆ ಕ್ಷೇತ್ರವು ನೆಲ ಕಚ್ಚಿತ್ತು. ಎಂಜಿನಿಯರ್‌ಗಳು ಮತ್ತು ವೈದ್ಯರು ರಾಜ್ಯದ ಹೊರೆಗೆ ಕೆಲಸ ಮಾಡುತ್ತಿದ್ದರು ಎಂದು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.
ಬಿಹಾರ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕಾಣುತ್ತಿದೆ. ಕೈಗಾರಿಕೆಗಳ ರಾಜ್ಯವಾಗಿದೆ. ಯುವಕರಿಗೆ ಉದ್ಯೋಗ ಸಿಗುತ್ತಿದೆ. ಬಿಹಾರ ಇನ್ನೆಂದಿಗೂ ಅರಾಜಕತೆಯತ್ತ ಮುಖ ಮಾಡುವುದಿಲ್ಲ ಎಂದು ನಿತೀಶ್ ಭರವಸೆಯ ಮಾತುಗಳನ್ನಾಡಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯು ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.