ADVERTISEMENT

Diwali: ಹಿಮಾಚಲ ಪ್ರದೇಶದ ಈ ಊರಿನಲ್ಲಿ ದೀಪಾವಳಿ ಸಂಭ್ರಮ ನಿಷಿದ್ಧ; ಕಾರಣ ಏನು?

ಪಿಟಿಐ
Published 18 ಅಕ್ಟೋಬರ್ 2025, 14:33 IST
Last Updated 18 ಅಕ್ಟೋಬರ್ 2025, 14:33 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೃಪೆ: Gemini

ಶಿಮ್ಲಾ: ಹಮೀರ್‌ಪುರ ಜಿಲ್ಲೆಯ ಸಮ್ಮೂ ಎಂಬ ಗ್ರಾಮದಲ್ಲಿ ಹಲವು ಶತಮಾನಗಳಿಂದ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವ ಪರಿಪಾಠವಿಲ್ಲ. ಆ ರೂಢಿ ಈ ವರ್ಷವೂ ಮುಂದುವರಿದಿದೆ.

ADVERTISEMENT

ಬಹಳ ಹಿಂದೆ ಮಹಿಳೆಯೊಬ್ಬರು ದೀಪಾವಳಿಯಂದು ತನ್ನ ಪತಿಯ ಚಿತೆಗೆ ಹಾರಿದ್ದರು. ಆ ವೇಳೆ, ಹಬ್ಬದ ದಿನವನ್ನು ಶಪಿಸಿದ್ದರು. ಅಂದಿನಿಂದ ಉದ್ದೇಶಪೂರ್ವಕವಾಗಿಯೇ ದೀಪಾವಳಿ ಆಚರಣೆಯನ್ನು ನಿಲ್ಲಿಸಲಾಗಿದೆ ಎಂದು ಗ್ರಾಮದ ವೀಣಾ ದೇವಿ ಎಂಬವರು ತಿಳಿಸಿದ್ದಾರೆ.

ಹಮೀರ್‌ಪುರ ಜಿಲ್ಲಾ ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ, ಜನರು ಹೆಚ್ಚೆಂದರೆ ತಮ್ಮ ಮನೆಗಳಲ್ಲಿ ಮಣ್ಣಿನ ದೀಪಗಳನ್ನು ಬೆಳಗಬಹುದಾಗಿದೆ. ಪಟಾಕಿಗಳನ್ನು ಸಿಡಿಸುವುದಕ್ಕಾಗಲೀ, ದುಂದು ವೆಚ್ಚ ಮಾಡುವುದಕ್ಕಾಗಲೀ ಅವಕಾಶವಿಲ್ಲ.

ನಿಯಮ ಉಲ್ಲಂಘನೆಯಾದರೆ, ಅನಾಹುತಗಳು ಸಂಭವಿಸುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆ.

ಗ್ರಾಮಸ್ಥರು ಹೇಳುವ ಪ್ರಕಾರ, ನೂರಾರು ವರ್ಷಗಳ ಹಿಂದೆ ಗರ್ಭಿಣಿಯೊಬ್ಬರು ದೀಪಾವಳಿ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆ ಸಮಯದಲ್ಲಿ, ಸ್ಥಳೀಯ ರಾಜನ ಸೇನೆಯಲ್ಲಿ ಯೋಧನಾಗಿದ್ದ ಪತಿ ಮೃತಪಟ್ಟು, ಶವವನ್ನು ಮನೆಗೆ ತರಲಾಗಿತ್ತು. ಇದರಿಂದ ಆಘಾತಕ್ಕೊಳಗಾದ ಮಹಿಳೆ, ಪತಿಯ ಅಂತ್ಯ ಸಂಸ್ಕಾರದ ವೇಳೆ ಸ್ವತಃ ಚಿತೆಗೆ ಹಾರಿದ್ದರು. ಆದರೆ, ಅದಕ್ಕೂ ಮುನ್ನ ದೀಪಾವಳಿ ದಿನವನ್ನು ಶಪಿಸಿದ್ದರು. ಊರಿನ ಯಾರೊಬ್ಬರೂ ಹಬ್ಬವನ್ನು ಆಚರಿಸಬಾರದು ಎಂದು ಗೋಳಾಡಿದ್ದರು.

ಆಕೆಯ ಶಾಪವನ್ನು ಮೀರಿ ಹಬ್ಬ ಆಚರಿಸಲು ಮುಂದಾದಾಗಲೆಲ್ಲ, ಊರಿನಲ್ಲಿ ಯಾರಾದರೂ ಮೃತಪಡುವುದು ಅಥವಾ ವಿಪತ್ತುಗಳು ಎದುರಾಗುವುದು ನಡೆಯುತ್ತಲೇ ಇದೆ ಎಂದು ಗ್ರಾಮದ ಹಿರಿಯ ಠಾಕುರ್‌ ಬಿಧಿಲ್‌ ಚಾಂದ್‌ ಎಂಬವರು ಹೇಳಿದ್ದಾರೆ.

ಹೋಮ ಹವನ ನಡೆಸಿ ಶಾಪ ವಿಮೋಚನೆ ಮಾಡಿಕೊಳ್ಳುವ ಪ್ರಯತ್ನಿಸಲಾಗಿದೆ. ಆದರೂ, ಯಾವ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಯಜ್ಞ ನಡೆಸಲಾಗಿತ್ತು. ಆದಾಗ್ಯೂ, ಶಾಪ ಕಳೆದುಕೊಳ್ಳಲು ಆಗಿಲ್ಲ ಎಂದು ಮತ್ತೊಬ್ಬ ವ್ಯಕ್ತಿ ವಿಜಯ್‌ ಕುಮಾರ್ ಹೇಳಿದ್ದಾರೆ.

ಶಾಪದ ಬಗ್ಗೆ ಇಲ್ಲಿನ ಜನರಲ್ಲಿ ಈಗಲೂ ನಂಬಿಕೆ ಹಾಗೂ ಭಯ ಎಷ್ಟರ ಮಟ್ಟಿಗೆ ಇದೆ ಎಂದರೆ, ಹಲವರು ಹಬ್ಬದ ದಿನ ಮನೆಗಳಿಂದಲೇ ಹೊರಗೆ ಬರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.