
ದಯಾನಿಧಿ ಮಾರನ್
ಪಿಟಿಐ
ಚೆನ್ನೈ: ‘ಉತ್ತರ ಭಾರತದ ಹೆಣ್ಣು ಮಕ್ಕಳು ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದಾರೆ’ ಎಂದು ಹೇಳುವ ಮೂಲಕ ಡಿಎಂಕೆ ಸಂಸದ ದಯಾನಿಧಿ ಮಾರನ್ ಮತ್ತೊಂದು ವಿವಾದದ ಸುಳಿಗೆ ಸಿಲುಕಿದ್ದಾರೆ.
ಈ ಹಿಂದೆ ಹಿಂದಿ ಭಾಷಿಗರು ತಮಿಳುನಾಡಿನಲ್ಲಿ ಶೌಚಾಲಯ ತೊಳೆಯುತ್ತಾರೆ ಎಂದು ಹೇಳಿ ಉತ್ತರ ಭಾರತದ ಜನರ ಕೋಪಕ್ಕೆ ಗುರಿಯಾಗಿದ್ದರು.
ಇಲ್ಲಿನ ಕ್ವಾಯ್ದ್-ಇ-ಮಿಲ್ಲತ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳನ್ನು ಶಿಕ್ಷಣ ಮತ್ತು ವೃತ್ತಿ ಬದುಕಿನಿಂದ ದೂರ ಮಾಡಿ ಮನೆಗೆಲಸ ಮಾಡುವಂತೆ ಪ್ರೋತ್ಸಾಹಿಸಲಾಗುತ್ತದೆ. ಆದರೆ, ತಮಿಳುನಾಡಿನಲ್ಲಿ ಮಹಿಳಾ ಶಿಕ್ಷಣ ಮತ್ತು ಸಬಲೀಕರಣವನ್ನು ಪ್ರೋತ್ಸಾಹಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ಉತ್ತರ ಭಾರತದ ರಾಜ್ಯಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಕೆಲಸಕ್ಕೆ ಕಳುಹಿಸದೇ ಮನೆಗೆಲಸ ಮಾಡುವಂತೆ ಹೇಳುತ್ತಾರೆ. ಆದರೆ, ನಮ್ಮಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದನ್ನು ಪ್ರೋತ್ಸಾಹಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಇಷ್ಟೇ ಅಲ್ಲ, ಉತ್ತರ ಭಾರತದ ರಾಜ್ಯಗಳು ಇಂಗ್ಲೀಷ್ ಕಲಿಯುವುದನ್ನು ಉತ್ತೇಜಿಸುವುದಿಲ್ಲ. ಹೆಣ್ಣು ಮಕ್ಕಳು ಇಂಗ್ಲೀಷ್ ಕಲಿಯದಂತೆ ಮಾಡಿ ಅವರನ್ನು ಗುಲಾಮರಂತೆ ನೋಡಿಕೊಳ್ಳಲಾಗುತ್ತಿದೆ’ ಎಂದಿದ್ದಾರೆ.
ಶಿಕ್ಷಣವನ್ನು ಹಿಂದಿ ಭಾಷೆಗೆ ಸೀಮಿತಗೊಳಿಸಿದ್ದರಿಂದ ಉತ್ತರ ಭಾರತದಲ್ಲಿ ನಿರುದ್ಯೋಗ ಹೆಚ್ಚಿದೆ ಎಂದು ಹೇಳಿರುವ ಅವರು, ತಮಿಳುನಾಡಿನ ದ್ರಾವಿಡ ಮಾದರಿಯು ಹೆಣ್ಣು ಮತ್ತು ಗಂಡು ಇಬ್ಬರಿಗೂ ಶಿಕ್ಷಣದಲ್ಲಿ ಸಮಾನ ಅವಕಾಶವನ್ನು ನೀಡುತ್ತಿದೆ. ಇದು ದಕ್ಷಿಣ ರಾಜ್ಯಗಳಲ್ಲಿ ಸಾಕ್ಷರತೆ ಹೆಚ್ಚಲು ಕಾರಣ ಎಂದಿದ್ದಾರೆ.
ಮಾರನ್ ಅವರ ಹೇಳಿಕೆಯನ್ನು ವಿರೋಧಿಸಿರುವ ಬಿಜೆಪಿ ನಾಯಕ ತಿರುಪತಿ ನಾರಾಯಣ, ‘ಉತ್ತರ ಭಾರತದ ಜನರು ಶಿಕ್ಷಣವಿಲ್ಲದವರು, ಅನಾಗರಿಕರು ಎಂದು ಹೇಳಿರುವ ಮಾರನ್ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ಯಾವುದೇ ಸಾಮಾನ್ಯ ಜ್ಞಾನ ಹೊಂದಿಲ್ಲ ಎನ್ನುವುದು ಇದರಿಂದ ತಿಳಿಯುತ್ತದೆ. ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲಿ’ ಎಂದು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.