ADVERTISEMENT

ಸಿಖ್‌ ಸೈನಿಕರಿಗೆ ಹೆಲ್ಮೆಟ್‌ ಕಡ್ಡಾಯ? ಬ್ರಿಟಿಷರೂ ಹೀಗೆ ಮಾಡಿರಲಿಲ್ಲ ಎಂದು ವಿರೋಧ

ಪಿಟಿಐ
Published 14 ಜನವರಿ 2023, 2:00 IST
Last Updated 14 ಜನವರಿ 2023, 2:00 IST
ಸಿಖ್‌ ರೆಜಿಮೆಂಟ್‌ನ ಕವಾಯತು
ಸಿಖ್‌ ರೆಜಿಮೆಂಟ್‌ನ ಕವಾಯತು    

ಚಂಡೀಗಢ: ಸೇನೆಯಲ್ಲಿ ಸಿಖ್‌ ಸೈನಿಕರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸುವ ಕ್ರಮವನ್ನು ಪಂಜಾಬ್‌ನ ವಿರೋಧ ಪಕ್ಷ ಕಾಂಗ್ರೆಸ್‌ ಮತ್ತು ಶಿರೋಮಣಿ ಅಕಾಲಿದಳ ವಿರೋಧಿಸಿವೆ.

ಸಿಖ್‌ ಸೈನಿಕರಿಗಾಗಿ ವಿಶೇಷವಾಗಿ ಸಿದ್ಧಪಡಿಸಲಾದ ಹೆಲ್ಮೆಟ್‌ಗಳ ಖರೀದಿಗೆ ಸೇನೆ ಮುಂದಾಗಿದೆ. ಇನ್ನು ಮುಂದೆ ಸಿಖ್‌ ಸೈನಿಕರಿಗೆ ಹೆಲ್ಮೆಟ್‌ ಕಡ್ಡಾಯವಾಗಲಿದೆ ಎಂಬ ಪತ್ರಿಕಾ ವರದಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಅಕಾಲಿ ದಳ ಪಕ್ಷಗಳು ಆಕ್ರೋಶಗೊಂಡಿವೆ.

‘ಸಿಖ್ಖರು 1962, 1965, 1971ರ ಯುದ್ಧಗಳು ಮತ್ತು ಕಾರ್ಗಿಲ್ ಯುದ್ಧದಲ್ಲಿ ಧೈರ್ಯದಿಂದ ಹೋರಾಡಿದ್ದಾರೆ. ಆದರೆ ಆಗ ಹೆಲ್ಮೆಟ್ ಸಮಸ್ಯೆ ಉದ್ಭವಿಸಿರಲಿಲ್ಲ’ ಎಂದು ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ ಸುಖಜೀಂದರ್ ಸಿಂಗ್ ರಾಂಧವಾ ಹೇಳಿದ್ದಾರೆ.

ADVERTISEMENT

‘ಸಿಖ್ ಸೈನಿಕರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಹೆಲ್ಮೆಟ್‌ಗಾಗಿ ಒಬ್ಬ ಸಿಖ್ ತನ್ನ ಟರ್ಬನ್‌ ಅನ್ನು ಎಂದಿಗೂ ತೆಗೆಯಲಾರ. ಸರ್ಕಾರ ತಕ್ಷಣವೇ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಮತ್ತು ಪ್ರಧಾನಿ ಕ್ಷಮೆಯಾಚಿಸಬೇಕು’ ಎಂದು ರಾಂಧವಾ ಸುದ್ದಿಗಾರರಿಗೆ ತಿಳಿಸಿದರು.

ದೇಶದ ಸಶಸ್ತ್ರ ಪಡೆಗಳಲ್ಲಿ ಸಿಖ್ಖರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ಕ್ರಮವನ್ನು ವಿರೋಧಿಸಿರುವ ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್‌, ಈ ವಿಚಾರವಾಗಿ ಪ್ರಧಾನಿ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದೊಂದು ಪ್ರಚೋದನಕಾರಿ ಮತ್ತು ಸಂವೇದನಾ ರಹಿತ ಕ್ರಮ ಎಂದೂ ಬಾದಲ್ ಆರೋಪಿಸಿದ್ದಾರೆ.

‘ಬ್ರಿಟಿಷರು ಸಹ ಸಿಖ್ ಸೈನಿಕರ ಮೇಲೆ ಇಂಥ ಕ್ರಮಗಳನ್ನು ಹೇರಿರಲಿಲ್ಲ. ಸಿಖ್ಖರು ಉತ್ಕಟ ದೇಶಭಕ್ತರು ಮತ್ತು 1948, 1962, 1965 ಮತ್ತು 1971 ರ ಯುದ್ಧಗಳಲ್ಲಿ ಮತ್ತು ಕಾರ್ಗಿಲ್ ಸೇರಿದಂತೆ ಇತರ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದಾರೆ’ ಎಂದು ಬಾದಲ್‌ ಹೇಳಿದರು.

‘ಯಾವುದೇ ಸಿಖ್ಖರು ಇಂಥ ರಕ್ಷಣೆ ಕೇಳದಿರುವಾಗ ಈ ಹಠಾತ್ ಬೆಳವಣಿಗೆ ಏಕೆ?’ ಎಂದು ಬಾದಲ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಪ್ರಶ್ನೆ ಮಾಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.