ADVERTISEMENT

ಕೇರಳ | ನರ್ಸಿಂಗ್ ಕಾಲೇಜಿನಲ್ಲಿ ರ್‍ಯಾಗಿಂಗ್: ಪ್ರಾಂಶುಪಾಲ, ಪ್ರಾಧ್ಯಾಪಕ ಅಮಾನತು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 6:38 IST
Last Updated 15 ಫೆಬ್ರುವರಿ 2025, 6:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಟಯಂ(ಕೇರಳ): ನರ್ಸಿಂಗ್ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಮತ್ತು ಸಹಾಯಕ ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ.

ನರ್ಸಿಂಗ್ ವಿದ್ಯಾರ್ಥಿಗಳಿಗೆ ಅಮಾನುಷವಾಗಿ ರ‍್ಯಾಗಿಂಗ್‌ ಮಾಡಿದ್ದನ್ನು ತಡೆಯಲು ವಿಫಲರಾದ ಕಾರಣ ಕಾಲೇಜಿನ ಪ್ರಾಂಶುಪಾಲರಾದ ಸುಲೇಖಾ ಎ.ಟಿ ಮತ್ತು ವಿದ್ಯಾರ್ಥಿನಿಲಯದ ಸಹಾಯಕ ಪ್ರಾಧ್ಯಾಪಕ ಹಾಗೂ ವಾರ್ಡನ್-ಇನ್-ಚಾರ್ಜ್ ಅಜೀಶ್ ಪಿ. ಮಣಿ ಅವರನ್ನು ಅಮಾನತುಗೊಳಿಸಿ, ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಮೊದಲ ವರ್ಷದ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ ಆರೋಪದಡಿ ಮೂರನೇ ವರ್ಷದ ಐವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೊದಲ ವರ್ಷದ ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ, ಅವರ ಮರ್ಮಾಂಗಗಳಿಗೆ ‘ಡಂಬಲ್‌’ಗಳನ್ನು ನೇತುಬಿಟ್ಟಿದ್ದರು. ರೇಖಾಗಣಿತದಲ್ಲಿ ಬಳಸುವ ಕೈವಾರದಿಂದ ಚುಚ್ಚಿ ಗಾಯಗಳನ್ನು ಮಾಡಿ, ಆ ಗಾಯಗಳಿಗೆ ಉರಿ ತರಿಸುವ ಕ್ರೀಮ್ ಹಚ್ಚಲಾಗಿತ್ತು. ನೋವಿನಿಂದ ಚೀರಿಕೊಂಡಾಗ, ಬಾಯಿಗೂ ಬಲವಂತವಾಗಿ ಕ್ರೀಮ್ ಹಚ್ಚಿದ್ದರು ಎಂದು ದೂರು ನೀಡಿದ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದರು.

ಈ ಪ್ರಕರಣ ಕೇರಳದಲ್ಲಿ ಸಾರ್ವಜನಿಕರ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ನಡೆದ ಕ್ರೂರ ರ‍್ಯಾಗಿಂಗ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.