ADVERTISEMENT

ಒಂದು ದೇಶ, ಒಂದು ಚುನಾವಣೆಗೆ ಒಂದು ಬಾರಿ ಸಂವಿಧಾನ ತಿದ್ದುಪಡಿ ಅಗತ್ಯ: ಚೌಹಾಣ್

ಪಿಟಿಐ
Published 21 ಮೇ 2025, 12:26 IST
Last Updated 21 ಮೇ 2025, 12:26 IST
<div class="paragraphs"><p> ಶಿವರಾಜ್ ಸಿಂಗ್ ಚೌಹಾಣ್ (ಸಂಗ್ರಹ ಚಿತ್ರ )</p></div>

ಶಿವರಾಜ್ ಸಿಂಗ್ ಚೌಹಾಣ್ (ಸಂಗ್ರಹ ಚಿತ್ರ )

   

ನವದೆಹಲಿ: ಆಡಳಿತಕ್ಕೆ ನಿರಂತರ ಅಡ್ಡಿಯಾಗುತ್ತಿರುವ ಹಾಗೂ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿರುವ ನಿರಂತರ ಚುನಾವಣೆಗಳನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಒಂದು ದೇಶ, ಒಂದು ಚುನಾವಣೆ’ ಜಾರಿಗೆ ಒಂದು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಹೇಳಿದ್ದಾರೆ.

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) ಆಯೋಜಿಸಿದ್ದ ಸಂವಾದದಲ್ಲಿ ವಿದ್ಯಾರ್ಥಿಗಳು ಹಾಗೂ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.

ADVERTISEMENT

‘ಒಂದು ದೇಶ, ಒಂದು ಚುನಾವಣೆ ಕುರಿತು ಗಂಭೀರ ಚರ್ಚೆಗಳು ನಡೆಯಬೇಕಿವೆ. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಇದನ್ನು ಕೊನೆಗಾಣಿಸಬೇಕಾಗಿದೆ. ರಾಜಕೀಯ ನಾಯಕತ್ವ ಮತ್ತು ಆಡಳಿತ ಯಂತ್ರಕ್ಕೆ ನಿರಂತರ ಚುನಾವಣೆಗಳು ಅಡ್ಡಿಯಾಗಿವೆ. ಇದರಿಂದ ದೂರಗಾಮಿ ನೀತಿಗಳ ರೂಪಿಸುವ ಸಂಬಂಧ ನಡೆಯಬೇಕಾದ ಚರ್ಚೆಗಳಿಗೆ ಕಾಲಾವಕಾಶವೇ ಇಲ್ಲವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಯಾವುದೇ ರಾಜ್ಯಗಳಲ್ಲಿ ಚುನಾವಣೆ ನಡೆದರೂ ಹಿರಿಯ ಐಎಎಸ್ ಅಧಿಕಾರಿಗಳನ್ನು ವೀಕ್ಷಕರಾಗಿ ಕಳುಹಿಸಲಾಗುತ್ತದೆ. ಸಚಿವರಿಂದ ಪ್ರಧಾನಿವರೆಗೂ ಎಲ್ಲರೂ ತಮ್ಮ ಗಮನವನ್ನು ಚುನಾವಣೆಯತ್ತಲೇ ಕೇಂದ್ರೀಕರಿಸಿರುತ್ತಾರೆ. ಮಧ್ಯಪ್ರದೇಶವನ್ನೇ ಉದಾಹಾರಣೆಯಾಗಿ ತೆಗೆದುಕೊಂಡರೆ, 2023ರಿಂದ 2024ರವರೆಗೆ ವಿವಿಧ ಹಂತಗಳ ಚುನಾವಣೆಗಾಗಿ ಜಾರಿಗೊಳಿಸಲಾದ ಮಾದರಿ ನೀತಿ ಸಂಹಿತೆಯಿಂದಾಗಿ ಪ್ರಮುಖ ಆಡಳಿತಾತ್ಮಕ ಕಾರ್ಯಗಳು ನಡೆದಿಲ್ಲ. ಹೊಸ ಯೋಜನೆಗಳು ಜಾರಿಗೆ ಬಂದಿಲ್ಲ ಮತ್ತು ಸರ್ಕಾರದ ಆಡಳಿತ ಯಂತ್ರವೂ ಮಂದ ಗತಿಯಲ್ಲಿ ಸಾಗಿರುವುದನ್ನು ಗಮನಿಸಬಹುದು’ ಎಂದು ಚೌಹಾಣ್ ಹೇಳಿದ್ದಾರೆ.

1952ರಲ್ಲಿ ನಡೆದ ಚುನಾವಣೆಗೆ ₹9,000 ಕೋಟಿ ವೆಚ್ಚ

‘1952ರಲ್ಲಿ ಸಾರ್ವತ್ರಿಕ ಚುನಾವಣೆಯ ವೆಚ್ಚ ₹9 ಸಾವಿರ ಕೋಟಿಯಾಗಿತ್ತು. 2024ರಲ್ಲಿ ಇದು ₹1ಲಕ್ಷ ಕೋಟಿಗೆ ಏರಿಕೆಯಾಗಿದೆ. ವಿಧಾನಸಭಾ ಚುನಾವಣೆಗಳನ್ನೂ ಒಳಗೊಂಡರೆ ಈ ವೆಚ್ಚ ₹4ಲಕ್ಷ ಕೋಟಿಯಿಂದ ₹7ಲಕ್ಷ ಕೋಟಿಯಷ್ಟಾಗಬಹುದು. ಇದರಲ್ಲಿ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ವೆಚ್ಚ ಸೇರಿಲ್ಲ ಎಂಬುದನ್ನೂ ಗಮನಿಸಬೇಕು’ ಎಂದು ಅವರು ವಿವರಿಸಿದ್ದಾರೆ.

‘ಗಣರಾಜ್ಯದ ಆರಂಭದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಯುವ ಪದ್ಧತಿ ಇತ್ತು. 1952, 1957, 1962 ಮತ್ತು 1967ರಲ್ಲಿ ಚುನಾವಣೆ ನಡೆದಿವೆ. ಆದರೆ ಇವೆಲ್ಲವೂ ರಾಜ್ಯ ಸರ್ಕಾರಗಳಲ್ಲಿ ರಾಜಕೀಯ ಅಸ್ಥಿರತೆ ಆರಂಭವಾಗುವುದಕ್ಕೂ ಮೊದಲೇ ನಡೆದದ್ದು. ಕೆಲ ರಾಜ್ಯಗಳ ಚುನಾವಣೆಗಳು ಒಂದು ಬಾರಿ ಮುಂಚಿತವಾಗಿ ಅಥವಾ ವಿಳಂಬವಾಗಿ ನಡೆಸಿದಲ್ಲಿ ಇಡೀ ಪ್ರಕ್ರಿಯೆಗಳೇ ಸರಿದಾರಿಗೆ ಮರಳಲಿವೆ’ ಎಂದು ಚೌಹಾಣ್ ಹೇಳಿದ್ದಾರೆ.

‘ನಮ್ಮ ಪಕ್ಷ ವರ್ಷವಿಡೀ ಚುನಾವಣೆ ನಡೆಸಲು ಸಿದ್ಧವಿದೆ. ಆದರೆ ನಮಗೆ ರಾಷ್ಟ್ರದ ಹಿತ ಮುಖ್ಯ. ಈ ಬದಲಾವಣೆಯು ಯಾವುದೇ ಒಂದು ಪಕ್ಷದ ಹಿತಕ್ಕಾಗಿಯಲ್ಲ. ಬದಲಿಗೆ, ಸರ್ಕಾರದ ಆಡಳಿಯಂತ್ರವನ್ನು ಉತ್ತಮಪಡಿಸಿಕೊಳ್ಳಲು ಹಾಗೂ ವೆಚ್ಚದ ಹೊರೆಯನ್ನು ಕಡಿತಗೊಳಿಸುವ ಉದ್ದೇಶದ್ದಾಗಿದೆ’ ಎಂದಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳ ಕಾನೂನಿಗೂ ತಿದ್ದುಪಡಿ ಅಗತ್ಯ

‘ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ಒಮ್ಮೆಲೆ ಮಂಡನೆಯಾದ ಎರಡು ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿ ಪರಿಶೀಲಿಸುತ್ತಿದೆ. ಸಾಂವಿಧಾನಿಕ ಮಸೂದೆ ಹಾಗೂ ಕೇಂದ್ರಾಡಳಿತ ಕಾನೂನು ಮಸೂದೆಗಳು ಬದಲಾವಣೆ ತರಲು ಅಥವಾ ನಿರ್ದಿಷ್ಟ ಉದ್ದೇಶ ಈಡೇರಿಕೆಗೆ ಸೂಕ್ತವಾಗಿದೆಯೇ ಎಂಬುದನ್ನು ಈ ಸಮಿತಿ ಪರಿಶೀಲಿಸುತ್ತಿದೆ’ ಎಂದು ಚೌಹಾಣ್ ಹೇಳಿದ್ದಾರೆ.

‘ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕೆಂದರೆ ಕೇಂದ್ರಾಡಳಿತ ಹೊಂದಿರುವ ದೆಹಲಿ, ಪುದುಚೇರಿ ಮತ್ತು ಜಮ್ಮು ಹಾಗೂ ಕಾಶ್ಮೀರದಲ್ಲಿರುವ ವಿಧಾನಸಭೆಗಳ ಕಾನೂನಿನಲ್ಲಿ ಬದಲಾವಣೆ ಅಗತ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ಮತಪತ್ರ ಬಳಸಿ ಚುನಾವಣೆ ನಡೆಸುವ ವ್ಯವಸ್ಥೆಗೆ ಮರಳುವ ಯಾವುದೇ ಯೋಜನೆ ಇಲ್ಲ ಎಂದು ಸರ್ಕಾರವು ಹಲವು ಬಾರಿ ಸಂಸತ್ತಿನಲ್ಲಿ ಹೇಳಿದೆ. ಜತೆಗೆ ಸುಪ್ರೀಂ ಕೋರ್ಟ್‌ ಸಹ, ಚುನಾವಣೆಗಳಲ್ಲಿ ಮತಪತ್ರ ಬಳಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ವಿದ್ಯುನ್ಮಾನ ಮತಯಂತ್ರದ ಬಳಕೆಯನ್ನೇ ಬೆಂಬಲಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.