ADVERTISEMENT

Operation Sindoor: BSF ಮಹಿಳಾ ಯೋಧರ ಸನ್ಮಾನಿಸಿದ ಸೇನಾ ಮುಖ್ಯಸ್ಥ ಜ. ದ್ವಿವೇದಿ

ಪಿಟಿಐ
Published 31 ಮೇ 2025, 12:58 IST
Last Updated 31 ಮೇ 2025, 12:58 IST
<div class="paragraphs"><p>ನೇಹಾ ಭಂಡಾರಿ</p></div>

ನೇಹಾ ಭಂಡಾರಿ

   

ಪಿಟಿಐ ಚಿತ್ರ

ಜಮ್ಮು: ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರದಲ್ಲಿ ಪಾಲ್ಗೊಂಡ ಗಡಿ ಭದ್ರತಾ ಪಡೆಯ (BSF) ಮಹಿಳಾ ಅಧಿಕಾರಿಗಳನ್ನು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅರೆಸೇನಾ ಪಡೆ ಮತ್ತು ಮಾಜಿ ಯೋಧರ ಕಾರ್ಯವನ್ನೂ ಶ್ಲಾಘಿಸಿದರು. 

ADVERTISEMENT

ಭದ್ರತೆ ಪರಿಶೀಲನೆ ಕುರಿತು ಗೃಹ ಸಚಿವ ಅಮಿತ್ ಶಾ ಅವರು ನಡೆಸಿದ ಉನ್ನತ ಮಟ್ಟದ ಎರಡು ದಿನಗಳ ಸಭೆಯಲ್ಲಿ ಪಾಲ್ಗೊಂಡ ಅವರು ಮಹಿಳಾ ಸೇನಾಧಿಕಾರಿಗಳ ಕಾರ್ಯವನ್ನು ಪ್ರಶಂಸಿಸಿದರು. ಕಾಶ್ಮೀರದ ಪರಗ್ವಾಲ್‌ ಪ್ರಾಂತ್ಯ ಹಾಗೂ ಟೈಗರ್‌ ವಿಭಾಗಕ್ಕೆ ಭೇಟಿ ನೀಡಿದರು. ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಲ್ಲಿನ ಸೇನಾ ತುಕಡಿಗಳ ಅದ್ಭುತ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಭದ್ರತೆಯ ದೃಷ್ಟಿಯಲ್ಲಿ ಚಾಣಾಕ್ಷ ಹಾಗೂ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಬಿಎಸ್‌ಎಫ್‌ನ ಮಹಿಳಾ ತುಕಡಿಯ ಸಹಾಯಕ ಕಮಾಂಡೆಂಟ್‌ ನೇಹಾ ಭಂಡಾರಿ ಮತ್ತು ಅವರ ತಂಡವು ಗಡಿಯಲ್ಲಿ ಶತ್ರುಗಳೊಂದಿಗೆ ಮುಖಾಮುಖಿಯಾಗಿ ಹೋರಾಡಿದ್ದು ಮತ್ತು ಅಖನೂರ್‌ ವಿಭಾಗದಲ್ಲಿ ಶತ್ರುಗಳ ನೆಲೆಗಳನ್ನು ನಾಶಪಡಿಸಿದ್ದನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ನೇಹಾ ಭಂಡಾರಿ ಅವರಿಗೆ ಮೆಚ್ಚುಗೆಯ ಪದಕ ನೀಡಿ ಸನ್ಮಾನಿಸಿದರು.

ನೇಹಾ ಅವರೊಂದಿಗೆ ಆರು ಮಹಿಳಾ ಸೈನಿಕರು ಹಾಗೂ 19 ಗಡಿ ರಕ್ಷಣಾ ಗಾರ್ಡ್‌ಗಳು ಅಂತರರಾಷ್ಟ್ರೀಯ ಗಡಿ ರೇಖೆಯ ಸಾಂಬಾ–ಆರ್‌ ಎಸ್‌ ಪುರ ಅಖನೂರ್‌ ಸೇನಾ ನೆಲೆಗಳಲ್ಲಿದ್ದು ಶತ್ರುಗಳ ಪ್ರತಿ ದಾಳಿಯನ್ನೂ ಸಮರ್ಥವಾಗಿ ಎದುರಿಸಿ, ಅವರನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಉತ್ತರಾಖಂಡ ಮೂಲದವರಾದ ನೇಹಾ ಭಂಡಾರಿ ಅವರದ್ದು ಸೈನಿಕ ಹಿನ್ನೆಲೆಯ ಕುಟುಂಬ. ಭಾರತೀಯ ಸೇನೆ ಸೇರಿದ ಇವರ ಕುಟುಂಬದ ಮೂರನೇ ತಲೆಮಾರಿನವರು ಇವರು. ‘ನನ್ನ ತಂಡದೊಂದಿಗೆ ಅಂತರರಾಷ್ಟ್ರೀಯ ಗಡಿರೇಖೆಯುದ್ದಕ್ಕೂ ದೇಶದ ರಕ್ಷಣೆ ಮಾಡುವುದು ನಮಗೆ ಹೆಮ್ಮೆಯ ಕ್ಷಣವಾಗಿತ್ತು. ನಾವಿದ್ದ ಸ್ಥಳ ಪಾಕಿಸ್ತಾನದ ನೆಲೆಯಿಂದ 150 ಮೀಟರ್‌ ದೂರದಲ್ಲಿದೆ ಎಂದು ನೇಹಾ ವಿವರಿಸಿದ್ದಾರೆ.

‘ಭಾರತದ ಕಡೆಯಲ್ಲಿ ನನ್ನ ಉಸ್ತುವಾರಿಯಲ್ಲಿ ಮೂರು ಸೇನಾ ನೆಲೆಗಳಿದ್ದವು. ಶತ್ರುಗಳ ಮೂರು ನೆಲೆಗಳನ್ನು ಗುರುತಿಸಿದೆವು. ನಮ್ಮ ಬಳಿ ಇದ್ದ ಎಲ್ಲಾ ಆಯುಧಗಳಿಂದ ಶತ್ರುಗಳ ಮೇಲೆ ಪ್ರಹಾರ ನಡೆಸಿದೆವು. ನಮ್ಮ ಕೆಚ್ಚು ಉತ್ತುಂಗದಲ್ಲಿತ್ತು. ನಾವೆಲ್ಲದರೂ ದೇಶ ಮತ್ತು ದೇಶಾಭಿಮಾನದಿಂದ ಕಾದಾಡಿದೆವು ನಮ್ಮ ದಾಳಿಯ ತೀವ್ರತೆ ತಡೆಯಲಾರದೆ ಶತ್ರುಗಳು ಓಡಿ ಹೋದರು’ ಎಂದು ತಮ್ಮ ಕಾರ್ಯಾಚರಣೆಯನ್ನು ನೇಹಾ ಈ ಹಿಂದೆ ವಿವರಿಸಿದ್ದರು.

‘ನಮ್ಮ ಅಜ್ಜ ಸೇನೆಯಲ್ಲಿದ್ದರು. ತಂದೆ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿದ್ದರು. ತಾಯಿಯೂ ಸಿಆರ್‌ಪಿಎಫ್‌ನಲ್ಲಿದ್ದರು. ಹೀಗಾಗಿ ಸಹಜವಾಗಿ ನನ್ನಲ್ಲಿ ದೇಶ ಕಾಯುವ ಕನಸು ಬಾಲ್ಯದಲ್ಲೇ ಬಿತ್ತಿತ್ತು. ಸೇನೆಯಲ್ಲಿ ಪುರುಷ ಸೈನಿಕರಿಗೆ ಸರಿಸಮವಾಗಿ ಮಹಿಳೆಯರೂ ಕಾರ್ಯಾಚರಣೆಯಲ್ಲಿ ತೊಡಗುತ್ತಿದ್ದಾರೆ. ಆಪರೇಷನ್ ಸಿಂಧೂರ ಸಂದರ್ಭದಲ್ಲೂ ಮೂರೂ ದಿನಗಳ ಕಾಲ ಮಹಿಳಾ ಸೈನಿಕರು ಶತ್ರುಗಳ ನಿದ್ದೆಗೆಡಿಸಿದ್ದಾರೆ. ಅವರು ಕದನಕಣದಿಂದ ಓಡಿಹೋಗುವಂತೆ ಮಾಡಿದ್ದಾರೆ’ ಎಂದಿದ್ದರು.

ನೇಹಾ ಭಂಡಾರಿ ತಂಡದ ಸಾಧನೆ ‘ಆಪ
ರೇಷನ್‌ ಸಿಂಧೂರ’ದ ವೇಳೆ ನೇಹಾ ಭಂಡಾರಿ ಅವರು ಆರು ಮಹಿಳಾ ಕಾನ್‌ಸ್ಟೆಬಲ್‌ಗಳ ತಂಡದ ಜೊತೆಗೆ ಸಾಂಬಾ, ಅಖ್ನೂರ್, ಆರ್‌.ಎಸ್‌.ಪುರದ ಅಂತರರಾಷ್ಟ್ರೀಯ ಗಡಿಯಲ್ಲಿ ಶತ್ರುಪಡೆಗಳ ನೆಲೆಗಳನ್ನು ಗುರಿಯಾಗಿರಿಸಿ ಕೊಂಡು ನಿಖರವಾದ ದಾಳಿ ನಡೆಸಿದ್ದರು. ಉತ್ತರಾಖಂಡ ಮೂಲದ ನೇಹಾ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂರನೇ ತಲೆಮಾರಿನವರು. ನೇಹಾ ಅವರ ಅಜ್ಜ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದು, ಪೋಷಕರು ಕೇಂದ್ರಿಯ ಮೀಸಲು ಪೊಲೀಸ್‌ ಪಡೆಯಲ್ಲಿ ಕೆಲಸ ಮಾಡಿದ್ದರು. ‘ಪಾಕಿಸ್ತಾನ ನೆಲೆಗಳ ಮೇಲೆ ದಾಳಿ ನಡೆಸಿ, ಪ್ರತ್ಯುತ್ತರ ನೀಡಿದ್ದು, ತಂಡಕ್ಕೆ ಹೆಮ್ಮೆಯ ವಿಚಾರವಾಗಿದೆ’ ಎಂದು ನೇಹಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.