
ಪುಣೆ: ‘ಆಪರೇಷನ್ ಸಿಂಧೂರ ಕಾರ್ಯಾಚರಣೆ ಪರಿಣಾಮವಾಗಿ ಪಾಕಿಸ್ತಾನವು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಯಿತು. ನೆರೆಯ ರಾಷ್ಟ್ರದ ಪರಿಸ್ಥಿತಿ ಚೆನ್ನಾಗಿಲ್ಲ ಎನ್ನುವುದರ ಸಾಕ್ಷಿ ಇದು’ ಎಂದು ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.
ಇಲ್ಲಿ ನಡೆದ ಸಾರ್ವಜನಿಕ ನೀತಿ ಉತ್ಸವದಲ್ಲಿ ಮಾತನಾಡಿದ ಅವರು, ‘ಸರ್ಕಾರವು ‘ಸಿಡಿಎಸ್’ ಅಧಿಕಾರಾವಧಿಯನ್ನು 2026ರ ಮೇ ತಿಂಗಳವರೆಗೆ ವಿಸ್ತರಿಸಿದೆ. ಈ ಗಡುವಿನ ಮೊದಲೇ ಸಶಸ್ತ್ರ ಪಡೆಗಳ ರೂಪಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಪಾಕಿಸ್ತಾನವು ಅಲ್ಲಿನ ಸಂವಿಧಾನದ 243ನೇ ವಿಧಿಗೆ ತಂದಿರುವ ತಿದ್ದುಪಡಿಯು, ಆ ದೇಶದ ರಕ್ಷಣಾ ಕೇತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತಂದಿದೆ. ಅವರು ಜಂಟಿ ಮುಖ್ಯಸ್ಥರ ಸಮಿತಿ ಅಧ್ಯಕ್ಷ ಹುದ್ದೆಯನ್ನು ರದ್ದುಪಡಿಸಿ, ಆ ಸ್ಥಾನಕ್ಕೆ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಫ್) ಹುದ್ದೆಯನ್ನು ಸೃಷ್ಟಿಸಿದ್ದಾರೆ. ರಾಷ್ಟ್ರೀಯ ಕಾರ್ಯತಂತ್ರ ಪಡೆ ರಚಿಸಲಾಗಿದೆ. ನಾವು ಇದನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.