ADVERTISEMENT

ಸ್ಪೀಕರ್ ಓಂ ಬಿರ್ಲಾ ಪದಚ್ಯುತಿಗೆ ವಿರೋಧ ಪಕ್ಷಗಳು ನೀಡಿದ ನೋಟಿಸ್‌ನಲ್ಲಿ ಏನಿದೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2026, 10:28 IST
Last Updated 10 ಫೆಬ್ರುವರಿ 2026, 10:28 IST
<div class="paragraphs"><p>ಓಂ ಬಿರ್ಲಾ. ಲೋಕಸಭೆ ಸ್ಪೀಕರ್</p></div>

ಓಂ ಬಿರ್ಲಾ. ಲೋಕಸಭೆ ಸ್ಪೀಕರ್

   

– ಪಿಟಿಐ ಚಿತ್ರ

ನವದೆಹಲಿ: ಲೋಕಸಭೆ ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ನೋಟಿಸ್ ನೀಡಿವೆ. ಈ ನೋಟಿಸ್‌ಗೆ 119 ಸಂಸದರು ಸಹಿ ಹಾಕಿದ್ದಾರೆ. ನೋಟಿಸ್ ಮಾನ್ಯವಾಗಬೇಕಾದರೆ ಕನಿಷ್ಠ 50 ಸಂಸದರ ಸಹಿ ಬೇಕು.

ADVERTISEMENT

ಭಾರತದ ಸಂವಿಧಾನದ 94ಸಿ ವಿಧಿಯಡಿ ನೋಟಿಸ್ ಸಲ್ಲಿಸಲಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪನಾಯಕ ಗೌರವ್ ಗೋಗೊಯ್ ತಿಳಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?

ಲೋಕಸಭೆಯ ಕಲಾಪಗಳನ್ನು ನಡೆಸುವಾಗ ಪಕ್ಷಪಾತ ತೋರಿಸುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ವಿರೋಧ ಪಕ್ಷದ ನಾಯಕರಿಗೆ ಹಲವು ಬಾರಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ಕೆಲವು ನಿದರ್ಶನಗಳನ್ನು ಉಲ್ಲೇಖಿಸಲಾಗಿದೆ.

  • 2025ರ ಫೆಬ್ರುವರಿ 2ರಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಕುರಿತಾದ ಭಾಷಣವನ್ನು ಪೂರ್ಣಗೊಳಿಸಲು ಅನುಮತಿ ನೀಡಲಿಲ್ಲ. ಇದು ಕೇವಲ ಒಂದು ಘಟನೆಯಲ್ಲ. ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ಬಹುತೇಕವಾಗಿ ಮಾತನಾಡಲು ಅವಕಾಶ ನೀಡಲಾಗುವುದಿಲ್ಲ.

  • 2025 ಫೆ. 3ರಂದು ವಿರೋಧ ಪಕ್ಷದ 8 ಸದಸ್ಯರನ್ನು ಬಜೆಟ್ ಅಧಿವೇಶನದ ಪೂರ್ಣ ಅವಧಿಗೆ ಸ್ವೇಚ್ಛಾನುಸಾರ ಅಮಾನತು ಮಾಡಲಾಗಿದೆ. ಅವರ ಹಕ್ಕನ್ನು ಪ್ರತಿಪಾದಿಸಿದ್ದಕ್ಕೆ ಈ ದಂಡನೆ ವಿಧಿಸಲಾಗಿದೆ.

  • 2025ರ ಫೆ. 4ರಂದು ಭಾರತೀಯ ಜನತಾ ‍ಪಕ್ಷದ ಸದಸ್ಯರೊಬ್ಬರು ಇಬ್ಬರು ಮಾಜಿ ಪ್ರಧಾನಿಗಳ ಬಗ್ಗೆ ಆಕ್ಷೇಪಾರ್ಹ ಹಾಗೂ ವೈಯಕ್ತಿಕ ದಾಳಿ ನಡೆಸಿದ್ದರು. ಸ್ಥಾಪಿತ ಸಂಪ್ರದಾಯಗಳು ಮತ್ತು ಶಿಷ್ಟಾಚಾರ ನಿರ್ಲಕ್ಷಿಸಿದ್ದಕ್ಕಾಗಿ ಒಮ್ಮೆಯೂ ಎಚ್ಚರಿಕೆಯೂ ನೀಡಲಿಲ್ಲ. ನಮ್ಮ ಮನವಿಯ ಹೊರತಾಗಿಯೂ ಪದೇ ಪದೇ ತಪ್ಪೆಸಗುತ್ತಿರುವ ಆ ಸದಸ್ಯರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ರಾಷ್ಟ್ರಪತಿ ಭಾಷಣವನ್ನು ಧ್ವನಿ ಮತದ ಮೂಲಕ ಅಂಗೀಕರಿಸುವಾಗ, ‘ಸ್ಪೀಕರ್ ಕಚೇರಿಯಲ್ಲಿ ವಿರೋಧ ಪಕ್ಷದ ಸದಸ್ಯರು ನಡೆದುಕೊಂಡ ರೀತಿ ನಮ್ಮ ಸಂಸದೀಯ ಪರಂಪರೆಗಳಿಗೆ ಸೂಕ್ತವಾದುದಲ್ಲ, ಅದು ಒಂದು ಕಪ್ಪು ಚುಕ್ಕೆ ಎಂದು ಹೇಳಿದ್ದರು’ ಎಂದು ಅಂದು ಸ್ಪೀಕರ್ ಆಡಿದ್ದ ಮಾತುಗಳನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

'ಕಾಂಗ್ರೆಸ್ ಸದಸ್ಯರು ದುರದೃಷ್ಟಕರ ಘಟನೆಗಳಿಗೆ ಕಾರಣವಾಗುವ ಅನಿರೀಕ್ಷಿತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇದ್ದ ಕಾರಣ ಸದನಕ್ಕೆ ಬಾರದಂತೆ ಪ್ರಧಾನಿ ಅವರಿಗೆ ನಾನೇ ಮನವಿ ಮಾಡಿದ್ದೆ' ಎಂದು ಸ್ಪೀಕರ್ ಹೇಳಿಕೆಯನ್ನೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಹೇಳಿಕೆಗಳು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರ ಮೇಲೆ ಸ್ಪಷ್ಟವಾಗಿ ಸುಳ್ಳು ಆರೋಪಗಳನ್ನು ಹೊರಿಸಿವೆಯಲ್ಲದೆ, ಮಾನಹಾನಿ ಸ್ವರೂಪದ್ದೂ ಆಗಿವೆ. ಕಾರ್ಯವಿಧಾನದ ನಿಯಮಗಳು ಮತ್ತು ಸಂಸದೀಯ ಘನತೆಯ ಮಾನದಂಡಗಳ ರಕ್ಷಕರಾಗಿರಬೇಕಾದ ಸ್ಪೀಕರ್, ಇಂತಹ ಹೇಳಿಕೆಗಳನ್ನು ನೀಡಲು ಸದನದ ವೇದಿಕೆಯನ್ನೇ ಬಳಸಿಕೊಂಡಿರುವುದು ಈ ಸಾಂವಿಧಾನಿಕ ಹುದ್ದೆಯ ದುರುಪಯೋಗವನ್ನು ಸೂಚಿಸುತ್ತದೆ

ನಾವು ಲೋಕಸಭೆಯ ಸಭಾಪತಿಯವರ ಬಗ್ಗೆ ವೈಯಕ್ತಿಕ ಗೌರವ ಹೊಂದಿದ್ದರೂ, ಸಾರ್ವಜನಿಕ ಹಿತಾಸಕ್ತಿಯ ನ್ಯಾಯಸಮ್ಮತವಾದ ವಿಷಯಗಳನ್ನು ಪ್ರಸ್ತಾಪಿಸುವಾಗ ವಿರೋಧ ಪಕ್ಷದ ಸಂಸದರನ್ನು ಪದೇ ಪದೇ ತಡೆಯುವ ಅವರ ನಡವಳಿಕೆ ನಮಗೆ ತೀವ್ರ ನೋವು ಮತ್ತು ಸಂಕಟವನ್ನು ಉಂಟುಮಾಡಿದೆ ಎಂದು ಲೋಕಸಭೆಯ ಕಾರ್ಯದರ್ಶಿಗೆ ಸಲ್ಲಿಸಿದ ನೋಟಿಸ್‌ನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.