ಮುಂಬೈ: ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರು ಎಂಎಲ್ಎ ಹಾಸ್ಟೆಲ್ ಕ್ಯಾಂಟೀನ್ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರು ಬುಧವಾರ ವಿಧಾನ ಭವನದ ಹೊರಗೆ 'ಬನಿಯನ್, ಟವಲ್' ಪ್ರತಿಭಟನೆ ನಡೆಸಿದರು.
ತಮ್ಮ ಉಡುಪಿನ ಮೇಲೆ ಬನಿಯನ್ ಮತ್ತು ಟವೆಲ್ ಹಾಕಿಕೊಂಡಿದ್ದ ಶಾಸಕರು ಆಡಳಿತಾರೂಢ ಮೈತ್ರಿಕೂಟವನ್ನು ಗೂಂಡಾ ರಾಜ್ ಎಂದು ಕರೆದು ಘೋಷಣೆಗಳನ್ನು ಕೂಗಿದರು.
‘ಎಂಎಲ್ಎ ಕ್ಯಾಂಟೀನ್‌ನಲ್ಲಿ ನೌಕರನ ಮೇಲೆ ನಡೆದ ಹಲ್ಲೆಯನ್ನು ಸರ್ಕಾರ ಕೂಡ ಬೆಂಬಲಿಸುತ್ತಿರುವಂತೆ ಕಾಣಿಸುತ್ತಿದೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ವರದಿಗಾರರಿಗೆ ತಿಳಿಸಿದರು.
ಶಾಸಕರ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ 'ಹಳಸಿದ' ಆಹಾರ ನೀಡಿದ್ದಕ್ಕಾಗಿ ಉದ್ಯೋಗಿಗೆ ಗಾಯಕ್ವಾಡ್ ಕಪಾಳಮೋಕ್ಷ ಮಾಡಿ ಗುದ್ದುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಬನಿಯನ್ ಹಾಕಿಕೊಂಡು ಸೊಂಟಕ್ಕೆ ಟವಲ್ ಸುತ್ತಿಕೊಂಡಿರುವ ಶಾಸಕ ಗಾಯಕ್ವಾಡ್, ಕ್ಯಾಂಟೀನ್ ಗುತ್ತಿಗೆದಾರನನ್ನು ಹಿಡಿದು ಬೇಳೆ ಇರುವ ಪೊಟ್ಟಣವನ್ನು ಮೂಸುವಂತೆ ಒತ್ತಾಯಿಸಿದ್ದಾನೆ. ಬಳಿಕ, ಕಪಾಳಕ್ಕೆ ಹೊಡೆದು ಗುದ್ದಿರುವ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.