ADVERTISEMENT

ವಿಪಕ್ಷಗಳು ಹತಾಶೆ ಹೊರಹಾಕಲು ಸಂಸತ್ತನ್ನು ಬಳಸಿಕೊಳ್ಳುತ್ತಿವೆ: PM ಮೋದಿ ಟೀಕೆ

ಪಿಟಿಐ
Published 1 ಡಿಸೆಂಬರ್ 2025, 6:36 IST
Last Updated 1 ಡಿಸೆಂಬರ್ 2025, 6:36 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: ವಿರೋಧ ಪಕ್ಷಗಳು ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನ ಹತಾಶೆಯನ್ನು ಹೊರಹಾಕಲು ಸಂಸತ್ತನ್ನು ಬಳಸಿಕೊಳ್ಳುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಚಳಿಗಾಲದ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಸಂಸತ್ ಭವನದ ಬಳಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ‘ವಿರೋಧ ಪಕ್ಷಗಳು ಸಂಸತ್ತನ್ನು ಚುನಾವಣೆಯ ಸಿದ್ಧತೆಗೆ ಬಳಸಿಕೊಳ್ಳಲು ಅಥವಾ ಸೋಲಿನ ನಂತರ ಹತಾಶೆಯನ್ನು ಹೊರಹಾಕುವ ಒಂದು ಮಾರ್ಗವಾಗಿ ಬಳಸಿಕೊಳ್ಳುತ್ತಿವೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಸಂಸತ್ ಅಧಿವೇಶನವು ರಾಜಕೀಯ ನಾಟಕಗಳಿಗೆ ವೇದಿಕೆಯಾಗಬಾರದು, ಬದಲಾಗಿ ರಚನಾತ್ಮಕ ಮತ್ತು ಫಲಿತಾಂಶ ಆಧಾರಿತ ಚರ್ಚೆಗೆ ವೇದಿಕೆಯಾಗಬೇಕು. ಹಾಗೆಯೇ ರಾಜಕೀಯದಲ್ಲಿ ಸಕಾರಾತ್ಮಕತೆಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ’ ಎಂದು ತಿಳಿಸಿದ್ದಾರೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಸೋಲನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಸಂಸತ್ ಅಧಿವೇಶನವು ಸೋಲಿನಿಂದ ಹುಟ್ಟಿದ ಹತಾಶೆಗೆ ಯುದ್ಧಭೂಮಿಯಾಗಬಾರದು. ಹಾಗೆಯೇ ಗೆಲುವು ಸಾಧಿಸಿದ ಬಳಿಕ ದುರಹಂಕಾರದಿಂದ ವರ್ತಿಸುವ ವೇದಿಕೆಯಾಗಬಾರದು’ ಎಂದೂ ಅವರು ಹೇಳಿದ್ದಾರೆ.

‘ಬಿಹಾರ ಚುನಾವಣೆ ಫಲಿತಾಂಶವು ದೇಶದ ಪ್ರಜಾಪ್ರಭುತ್ವದ ತಾಕತ್ತು ತೋರಿಸಿದೆ. ಪ್ರತಿಯೊಬ್ಬರು ಸಾರ್ವಜನಿಕ ಪ್ರತಿನಿಧಿಗಳಾಗಿ ಭವಿಷ್ಯದ ಬಗ್ಗೆ ಯೋಚಿಸಬೇಕಿದೆ. ನಾವು ದೇಶದ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು’ ಎಂದೂ ಅವರು ತಿಳಿಸಿದ್ದಾರೆ.

‘ಈ ಬಾರಿಯ ಅಧಿವೇಶನವು ಸಂಸತ್ತು ದೇಶದ ಬಗ್ಗೆ ಏನು ಯೋಚಿಸುತ್ತದೆ, ದೇಶಕ್ಕಾಗಿ ಅದು ಏನು ಮಾಡಲು ಬಯಸುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸಬೇಕು. ವಿಪಕ್ಷಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ದುರದೃಷ್ಟವಶಾತ್, ವಿಪಕ್ಷಗಳಿಗೆ ಬಿಹಾರದ ಚುನಾವಣೆ ಫಲಿತಾಂಶವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ.

ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು ಡಿ.19ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.