ನವದೆಹಲಿ: ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ದೇಶದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ತಿಳಿಸಿದ್ದಾರೆ.
ದೆಹಲಿಯಲ್ಲಿ ನೌಕಾಪಡೆ, ವಾಯುಪಡೆಯ ಅಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ್ದಾರೆ.
ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಮಾತನಾಡಿ, ‘ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವುದೇ ನಮ್ಮ ಟಾರ್ಗೆಟ್ ಆಗಿತ್ತು. ಅದರಂತೆಯೇ ನಾವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ (ಪಿಒಕೆ) 9 ಉಗ್ರರ ಅಡಗುತಾಣ ನಾಶ ಮಾಡಿದ್ದೇವೆ. ನಿಷೇಧಿತ ಲಷ್ಕರ್–ಎ–ತಯಬಾ, ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಗಳ ತರಬೇತಿ ಕೇಂದ್ರಗಳನ್ನೂ ಧ್ವಂಸಗೊಳಿಸಿದ್ದೇವೆ’ ಎಂದು ಹೇಳಿದ್ದಾರೆ.
ಪಾಕ್‌ನ ರಫೀಕಿ, ಮುರಿಯದ್, ಚಕ್ಲಾಲಾ, ರಹಿಮ್ಯಾರ್ ಖಾನ್, ಸುಕ್ಕೂರ್, ಚುನಿಯನ್‌ನ ಸೇನಾ ನೆಲೆಗಳು ಹಾಗೂ ಪಸ್ರೂರ್, ಸಿಯಾಲ್‌ಕೋಟ್ ವಾಯು ನೆಲೆಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಿ ಭಾರಿ ಹಾನಿ ಉಂಟು ಮಾಡಲಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ 35ರಿಂದ 40 ಯೋಧರು ಮೃತಪಟ್ಟಿದ್ದಾರೆ. ಪ್ರತಿದಾಳಿಯಲ್ಲೂ ಪಾಕ್‌ನ ಸೇನಾಧಿಕಾರಿಗಳು ಸಾವಿಗೀಡಾಗಿದ್ದಾರೆ. ಎಲ್‌ಒಸಿ ಬಳಿ ನಮ್ಮ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ರಾಜೀವ್ ಘಾಯ್ ತಿಳಿಸಿದ್ದಾರೆ.
ಗಡಿ ಭಾಗದ 26 ಪ್ರದೇಶಗಳ ಮೇಲೆ ಪಾಕ್ ಸೇನೆ ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. 700ಕ್ಕೂ ಹೆಚ್ಚು ಪಾಕ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನವು ಶ್ರೀನಗರ, ಅವಂತಿಪುರ ಮತ್ತು ಉಧಂಪುರ ವಾಯುನೆಲೆಗಳಲ್ಲಿನ ಮೆಡಿಕೇರ್ ಕೇಂದ್ರ ಮತ್ತು ಶಾಲಾ ಆವರಣ, ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಮಾಡಿದೆ. ಆದರೆ, ನಾವು ಪಾಕ್ ಸೈನಿಕರು, ನಾಗರಿಕರನ್ನು ಗುರಿಯಾಗಿಸಿ ಯಾವುದೇ ದಾಳಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ 11 ವಾಯುನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಪಹಲ್ಗಾಮ್ ಸಂತ್ರಸ್ತರಿಗೆ ನ್ಯಾಯ ಒದಗಿಸಿದ್ದೇವೆ. ನಾವು ನಡೆಸಿದ ಪ್ರತಿಯೊಂದು ದಾಳಿಗೂ ಸಾಕ್ಷಿ ಇದೆ. ಎಂದು ಅವರು ತಿಳಿಸಿದ್ದಾರೆ.
ಮೊದಲಿಗೆ ಪಾಕಿಸ್ತಾನದ ಡಿಜಿಎಂಒ, ಶನಿವಾರ ಮಧ್ಯಾಹ್ನ 3:30ಕ್ಕೆ ನಮಗೆ ಕರೆ ಮಾಡಿ ತುರ್ತು ಕದನ ವಿರಾಮಕ್ಕೆ ಮನವಿ ಮಾಡಿದ್ದರು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.