ADVERTISEMENT

ಆರ್ಥಿಕ ಕರಾಳತೆ, ಸರ್ಕಾರ ನೋಟು ಮುದ್ರಿಸಬೇಕಾದ ಪರಿಸ್ಥಿತಿ ಬಂದಿದೆ: ಪಿ ಚಿದಂಬರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2021, 11:24 IST
Last Updated 1 ಜೂನ್ 2021, 11:24 IST
ಪಿ ಚಿದಂಬರಂ
ಪಿ ಚಿದಂಬರಂ   

ನವದೆಹಲಿ: ಕಳೆದ ನಲವತ್ತು ವರ್ಷಗಳಲ್ಲೇ ಭಾರತದ ಆರ್ಥಿಕತೆಯ ಪಾಲಿಗೆ 2020–21 ನೇ ಹಣಕಾಸಿನ ವರ್ಷ ಕರಾಳ ವರ್ಷ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ.

ಅವರು ಮಂಗಳವಾರ ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ) ಕುರಿತು ನಡೆದ ವರ್ಚುವಲ್ ಸಂವಾದದಲ್ಲಿ ತಮ್ಮ ಈ ಅಭಿಪ್ರಾಯ ತಿಳಿಸಿದ್ದಾರೆ.

2020–21 ರ ಜಿಡಿಪಿ 2018–19 ರ ಜಿಡಿಪಿಗಿಂತಲೂ ಕಡಿಮೆಯಿದೆ. 2020–21 ರ ಹಣಕಾಸಿನ ವರ್ಷದ ನಾಲ್ಕೂ ತ್ರೈಮಾಸಿಕದ ವರದಿಗಳೇ ಜಿಡಿಪಿ ಕರುಣಾಜನಕ ಕಥೆಯನ್ನು ಹೇಳುತ್ತವೆ. ದೇಶದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಹೀಗಾಗಿ ಸರ್ಕಾರ ನೋಟುಗಳನ್ನು ಮುದ್ರಿಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಕಳೆದ ವರ್ಷದ ಮಧ್ಯಂತರದಲ್ಲಿ ಹಣಕಾಸು ಸಚಿವರು ಆರ್ಥಿಕತೆಯಲ್ಲಿ ಹಸಿರೆಲೆಗಳು ಗೋಚರಿಸುತ್ತಿವೆ ಎಂದು ಹೇಳಿದ್ದರು. ಇದೇನಾ ಆರ್ಥಿಕತೆಯ ಹಸಿರು? ಎಂದು ಅವರು ನಿರ್ಮಲಾ ಸೀತಾರಾಮನ್ ಅವರನ್ನು ಉದ್ದೇಶಿಸಿ ಲೇವಡಿ ಮಾಡಿದ್ದಾರೆ.

ದೇಶದ ತಲಾದಾಯವೂ ಕೂಡ ಕಳೆದ ಒಂದು ವರ್ಷದಲ್ಲಿ ಶೇ 8.2 ರಷ್ಟು ಕುಸಿದಿದ್ದು ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ ಭಾರತದ ಬಡವರ ಪ್ರಮಾಣ ತೀರಾ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಸೋಮವಾರ ರಾಷ್ಟ್ರೀಯ ಅಂಕಿಸಂಖ್ಯೆಗಳ ಕಚೇರಿ ಜಿಡಿಪಿಗೆ ಸಂಬಂಧಿಸಿದಂತೆ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ 2020–21 ರಲ್ಲಿ ಭಾರತದ ಜಿಡಿಪಿ ಶೇ 7.3 ಕ್ಕೆ ಕುಸಿತಗೊಂಡಿದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಚಿದಂಬರಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.