ADVERTISEMENT

ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ರಾಹುಲ್ ಮನವಿ; ಇದು ಒಳ್ಳೆಯ ಸಂದೇಶ: ಖರ್ಗೆ

ಪಿಟಿಐ
Published 8 ಮೇ 2025, 10:42 IST
Last Updated 8 ಮೇ 2025, 10:42 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ‘ಆಪರೇಷನ್ ಸಿಂಧೂರ’ ಕುರಿತು ಕರೆದಿದ್ದ ಸರ್ವ ಪಕ್ಷ ಸಭೆಯಲ್ಲಿ ಸರ್ಕಾರ ಮತ್ತು ಸೇನಾ ಪಡೆಗಳಿಗೆ ವಿರೋಧ ಪಕ್ಷಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ‘ಉತ್ತಮ ಸಂದೇಶವೊಂದನ್ನು ರವಾನೆ ಮಾಡಲು ಕೂಡಲೇ ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹ ಮಾಡಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ತಿಳಿಸಿದ್ದಾರೆ.

ಸರ್ವಪಕ್ಷ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಖರ್ಗೆ ಅವರು, ‘ಶೌರ್ಯ ಪ್ರದರ್ಶಿಸಿದ ಯೋಧರಿಗೆ ನಾವು ವಂದಿಸುತ್ತೇವೆ. ಪ್ರಧಾನಿಯವರು ಸಭೆಯಲ್ಲಿ ಭಾಗಿಯಾಗಬೇಕಿತ್ತು. ಉಗ್ರವಾದದ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಬೇಕು ಎಂದು ನಾವು ಬಯಸಿದ್ದೆವು. ಕಳೆದ ಬಾರಿ ನಡೆದ ಸಭೆಗೂ ಅವರು ಬಂದಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನೀವು ಮುನ್ನುಗ್ಗಿ, ನಿಮ್ಮೊಂದಿಗೆ ನಾವಿದ್ದೇವೆ. ಏನೇ ತೀರ್ಮಾನ ಮಾಡಿದರೂ ಸರ್ಕಾರ ಮತ್ತು ಸೇನೆಯ ಜೊತೆಗೆ ನಿಲ್ಲುತ್ತೇವೆ ಎಂದು ‘ಇಂಡಿ’ ಮೈತ್ರಿಕೂಟ ಮತ್ತು ಇತರೆ ಪಕ್ಷಗಳ ನಾಯಕರು ಒಮ್ಮತದಿಂದ ಹೇಳಿದ್ದೇವೆ. ಪ್ರಧಾನಿಯವರೂ ಸೇನೆಗೆ ಪೂರ್ಣ ಸ್ವಾತಂತ್ರ ನೀಡಿದ್ದಾರೆ’ ಎಂದು ಖರ್ಗೆ ಹೇಳಿದರು.

ADVERTISEMENT

ಜಮ್ಮು–ಕಾಶ್ಮೀರದಲ್ಲಿ ಶೆಲ್‌ ದಾಳಿಗೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಗಡಿ ಪ್ರದೇಶದಲ್ಲಿ ನೆಲಸಿರುವ ಜನರ ಹಿತದ ಕುರಿತು ಸಭೆಯಲ್ಲಿ  ಆತಂಕ ವ್ಯಕ್ತವಾಯಿತು. ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿತು. ಈ ವೇಳೆ ರಾಹುಲ್‌ ಗಾಂಧಿ ಅವರು ಜನತೆಗೆ ಉತ್ತಮ ಸಂದೇಶ ರವಾನಿಸಲು ವಿಶೇಷ ಅಧಿವೇಶನ ಕರೆಯುವಂತೆ ಸಲಹೆ ನೀಡಿದರು ಎಂದು ಖರ್ಗೆ ತಿಳಿಸಿದರು.

‘ವಿಶೇಷ ಸದನ ಕರೆದರೆ ಸಂಸದರು ತಮ್ಮ ಅಭಿಪ್ರಾಯ ತಿಳಿಸಲಿದ್ದು, ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲಿದ್ದಾರೆ ಎಂದು ತಿಳಿಸಿದೆವು. ಸರ್ಕಾರ ವಿಶೇಷ ಅಧಿವೇಶನ ಕರೆಯುವ ಭರವಸೆ ನೀಡಿಲ್ಲ’ ಎಂದು ಖರ್ಗೆ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.