ADVERTISEMENT

ಮುಚ್ಚಿದ ಅಟ್ಟಾರಿ–ವಾಘಾ ಗಡಿ: ಪಾಕಿಸ್ತಾನಿ ವಧು, ರಾಜಸ್ಥಾನಿ ವರನ ಮದುವೆಗೆ ಅಡ್ಡಿ

ಪಿಟಿಐ
Published 26 ಏಪ್ರಿಲ್ 2025, 11:43 IST
Last Updated 26 ಏಪ್ರಿಲ್ 2025, 11:43 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಪಿಟಿಐ

ಶ್ರೀನಗರ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೇಸರ್ ಕನ್ವರ್ ಅವರ ಜೊತೆ ಹಸೆಮಣೆಯೇರಲು ಸಿದ್ಧರಾಗಿದ್ದ ರಾಜಸ್ಥಾನದ ಶೈತಾನ್‌ ಸಿಂಗ್ ಅವರು, ಇದೀಗ ಅಟ್ಟಾರಿ–ವಾಘಾ ಗಡಿ ಮುಂದೆ ಅತಂತ್ರ ಸ್ಥಿತಿಯಲ್ಲಿ ನಿಂತಿದ್ದಾರೆ.

ADVERTISEMENT

ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಇಂದ್ರಾಯ್ ಗ್ರಾಮದ ನಿವಾಸಿಯಾಗಿರುವ ಶೈತಾನ್‌ ಸಿಂಗ್ ಮತ್ತು ಕೇಸರ್ ಕನ್ವರ್ ಅವರ ನಿಶ್ಚಿತಾರ್ಥ ನಾಲ್ಕು ವರ್ಷಗಳ ಹಿಂದೆಯೇ ನಡೆದಿತ್ತು. ಆದರೆ, ವೀಸಾ ಕಾರಣಕ್ಕೆ ವಿವಾಹ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ವರ್ಷಗಳ ಪ್ರಯತ್ನದ ನಂತರ ಕೊನೆಗೂ ಫೆಬ್ರವರಿ 18ರಂದು ವರನ ತಂದೆ ಮತ್ತು ಸಹೋದರನಿಗೆ ವೀಸಾ ದೊರೆತಿದ್ದು, ಎಲ್ಲಾ ವಿಘ್ನಗಳಿಂದ ಪಾರಾದೆವು ಎಂದು ಕುಟುಂಬ ಭಾವಿಸಿತ್ತು.

ಏಪ್ರಿಲ್ 30 ರಂದು ಪಾಕಿಸ್ತಾನದ ಅಮರ್‌ಕೋಟ್ ನಗರದಲ್ಲಿ ವಿವಾಹ ಕಾರ್ಯಕ್ರಮ ನಿಗದಿಯಾಗಿದ್ದು, ಮಂಗಳವಾರವೇ ವರನ ಕುಟುಂಬ ‘ಬರಾತ್‌’ ಜೊತೆ ಬಾರ್ಮರ್‌ಯಿಂದ ಅಟ್ಟಾರಿ ಗಡಿ ಕಡೆಗೆ ಪ್ರಯಾಣ ಬೆಳೆಸಿದ್ದರು.

ದುರಾದೃಷ್ಟವಶಾತ್‌ ಅವರು ಅಲ್ಲಿಗೆ ತಲುಪುವ ಹೊತ್ತಿಗೆ, ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ಬುಧವಾರ ಅಟ್ಟಾರಿ-ವಾಘಾ ಗಡಿಯನ್ನು ಬಂದ್ ಮಾಡಿತ್ತು. ಇದರಿಂದ ಶೈತಾನ್‌ ಕುಟುಂಬಕ್ಕೆ ಗಡಿ ದಾಟಲು ಅಧಿಕಾರಿಗಳು ಅವಕಾಶ ನಿರಾಕರಿಸಿದ್ದರು.

‘ಮದುವೆಗಾಗಿ ಬಹಳ ಸಮಯದಿಂದ ಕಾಯುತ್ತಿದ್ದೆವು’ ಎಂದು ವರ ಶೈತಾನ್‌ ಸಿಂಗ್‌ ಬೇಸರ ವ್ಯಕ್ತಪಡಿಸಿದ್ದಾರೆ.

‘ಭಯೋತ್ಪಾದಕರು ಏನೇ ಮಾಡಿದರೂ ಅದು ತಪ್ಪೇ. ಇದರಿಂದ ನಮ್ಮ ಮದುವೆಗೆ ಅಡ್ಡಿಯಾಗಿದೆ. ಏನು ಮಾಡಬೇಕು? ಇದು ಗಡಿಯ ವಿಷಯ’ ಎಂದು ಸಿಂಗ್ ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ.

‘ಈ ಪರಿಸ್ಥಿತಿ ಎರಡೂ ಕುಟುಂಬಗಳನ್ನು ನಿರಾಶೆಗೊಳಿಸಿದೆ’ ಎಂದು ವರನ ಸೋದರ ಸಂಬಂಧಿ ಸುರೇಂದ್ರ ಸಿಂಗ್ ಹೇಳಿದ್ದಾರೆ.

‘ಪಾಕಿಸ್ತಾನದಲ್ಲಿರುವ ನಮ್ಮ ಸಂಬಂಧಿಗಳು ಇಲ್ಲಿಗೆ ಬಂದಿದ್ದರು. ಆದರೆ, ಅವರು ಈಗ ಹಿಂತಿರುಗಬೇಕಾಯಿತು. ನಾವು ತುಂಬಾ ನಿರಾಶೆಗೊಂಡಿದ್ದೇವೆ. ಭಯೋತ್ಪಾದಕ ದಾಳಿಯಿಂದ ಎಲ್ಲರೂ ತೊಂದರೆ ಅನುಭವಿಸುವಂತಾಯಿತು’ ಎಂದು ಅವರು ಹೇಳಿದ್ದಾರೆ.

ಶೈತಾನ್ ಸಿಂಗ್ ಅವರ ವೀಸಾ ಮೇ 12 ರವರೆಗೆ ಮಾನ್ಯವಾಗಿದ್ದು, ಸಕಾಲದಲ್ಲಿ ಗಡಿ ಮತ್ತೆ ತೆರೆದರೆ ಮದುವೆ ನಡೆಯಬಹುದೆಂಬ ಭರವಸೆಯನ್ನು ಕುಟುಂಬಗಳು ವ್ಯಕ್ತಪಡಿಸಿವೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಸೋಧಾ ರಜಪೂತ ಸಮುದಾಯದವರು ಗಮನಾರ್ಹ ಸಂಖ್ಯೆಯಲ್ಲಿ ಇದ್ದಾರೆ. ಸಮುದಾಯದ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸುವ ಭಾಗವಾಗಿ ಭಾರತ ವಿವಿಧ ಭಾಗಗಳಲ್ಲಿರುವ ಇದೇ ಸಮುದಾಯದವರು ಗಡಿಯಾಚೆಗಿನ ವಿವಾಹ ಸಂಬಂಧ ಬೆಳೆಸುತ್ತಾರೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ.

ಮಂಗಳವಾರ(ಏ.22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿರುವ ಭಾರತ, ವಾಘಾ–ಅಟ್ಟಾರಿ ಗಡಿಯನ್ನು ಮುಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.