ADVERTISEMENT

Operation Sindoor: ಭಯೋತ್ಪಾದಕರ ನಿಗ್ರಹಕ್ಕೆ ಭಾರತದ ಕ್ರಮ ಬೆಂಬಲಿಸಿದ ಇಸ್ರೇಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಮೇ 2025, 14:02 IST
Last Updated 7 ಮೇ 2025, 14:02 IST
<div class="paragraphs"><p>ರುವೇನ್ ಅಜರ್ ಮತ್ತು ಎಸ್‌. ಜೈಶಂಕರ್</p></div>

ರುವೇನ್ ಅಜರ್ ಮತ್ತು ಎಸ್‌. ಜೈಶಂಕರ್

   

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು (ಬುಧವಾರ) ಮುಂಜಾನೆ ನಡೆಸಿದ ಕ್ಷಿಪಣಿ ದಾಳಿಯನ್ನು ಇಸ್ರೇಲ್ ಬೆಂಬಲಿಸಿದೆ.

ಈ ಕುರಿತು ಎಕ್ಸ್‌/ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೇನ್ ಅಜರ್, ‘ಮುಗ್ದರ ಮೇಲೆ ಹೀನ ಕೃತ್ಯ ಎಸಗಿದವರಿಗೆ ಅಡಗಿಕೊಳ್ಳಲು ಎಲ್ಲಿಯೂ ಜಾಗವಿಲ್ಲ ಎಂಬುದನ್ನು ಭಯೋತ್ಪಾದಕರು ಗಮದಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ಭಯೋತ್ಪಾದಕರ ನಿಗ್ರಹಕ್ಕೆ ಭಾರತ ಕೈಗೊಂಡಿರುವ ಆತ್ಮರಕ್ಷಣೆಯ ಕ್ರಮವನ್ನು ಇಸ್ರೇಲ್ ಬೆಂಬಲಿಸುತ್ತದೆ’ ಎಂದು ಹೇಳಿದ್ದಾರೆ.

ʼಆಪರೇಷನ್‌ ಸಿಂಧೂರ’ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪ್ರತಿಕ್ರಿಯಿಸಿ, ‘ಇದನ್ನು ಬೇಗ ಮುಗಿಸುತ್ತೀರೆಂಬ ಭಾವನೆ ಇದೆ’ ಎಂಬ ಹೇಳಿಕೆಯನ್ನು ಸುದ್ದಿಸಂಸ್ಥೆ ಪಿಟಿಐ ಪೋಸ್ಟ್ ಹಂಚಿಕೊಂಡಿದೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಲಷ್ಕರ್-ಎ-ತಯಬಾ (ಎಲ್ಇಟಿ), ಜೈಶ್-ಎ-ಮೊಹಮ್ಮದ್‌ (ಜೆಇಎಂ) ಉಗ್ರ ಸಂಘಟನೆಗಳಿಗೆ ಸೇರಿದ 9 ನೆಲೆಗಳ ಮೇಲೆ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಎಂಬ ಕಾರ್ಯಾಚರಣೆ ನಡೆಸಿದೆ. ಈ ದಾಳಿಯ ಮಾಹಿತಿಯನ್ನು ಐದು ದೇಶಗಳೊಂದಿಗೆ ಭಾರತ ಹಂಚಿಕೊಂಡಿದೆ.

ಅಮೆರಿಕ, ಬ್ರಿಟನ್‌, ಸೌದಿ ಅರೇಬಿಯಾ, ಸಂಯುಕ್ತ ಅರಬ್ ಸಂಸ್ಥಾನ ಮತ್ತು ರಷ್ಯಾದೊಂದಿಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಭಾರತದ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಆದಾಗ್ಯೂ ಚೀನಾದೊಂದಿಗೆ ದಾಳಿಯ ಮಾಹಿತಿ ಹಂಚಿಕೊಂಡಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 

ಈ ಕಾರ್ಯಾಚರಣೆಯನ್ನು ಬುಧವಾರ ಬೆಳಗಿನ ಜಾವ 1.05ರಿಂದ 1.30ರವರೆಗೆ ನಡೆಸಲಾಯಿತು. ಪಹಲ್ಗಾಮ್‌ನಲ್ಲಿ ಮೃತಪಟ್ಟ ಪ್ರವಾಸಿಗರಿಗಾಗಿ ಕಾರ್ಯಾಚರಣೆ ನಡೆಸಲಾಯಿತು.

ನಾವು ಯಾವುದೇ ನಾಗರಿಕರ ಮೇಲಾಗಲಿ ಅಥವಾ ಪಾಕ್ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ಕೇವಲ ಉಗ್ರರ ನೆಲೆಗಳನ್ನು ಮಾತ್ರ ಧ್ವಂಸಗೊಳಿಸಿದ್ದೇವೆ. ನಾಗರಿಕರಿಗೆ ಹಾನಿ ಮಾಡುವುದು, ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಆರ್ಥಿಕ ನಷ್ಟ ಮಾಡುವುದು ನಮ್ಮ ಉದ್ದೇಶವಲ್ಲ. ಉಗ್ರರ ನೆಲೆಗಳನ್ನು ಧ್ವಂಸ ಮಾಡುವುದೇ ಈ ಕಾರ್ಯಾಚರಣೆಯ ಉದ್ದೇಶ ಎಂದು ಮಾಹಿತಿ ಹಂಚಿಕೊಂಡಿರುವ ದೇಶಗಳಿಗೆ ವಿವರಿಸಲಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನದ ಬಹಾವಲ್‌ಪುರದಲ್ಲಿರುವ ಜೆಇಎಂ ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಎಲ್‌ಇಟಿ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಿರುವುದನ್ನು ಭದ್ರತಾ ಪಡೆಗಳು ಖಚಿತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.