ADVERTISEMENT

'ಆಪರೇಷನ್ ಸಿಂಧೂರ' ನಿಲ್ಲಿಸಲು ಯಾವುದೇ ಒತ್ತಡ ಇರಲಿಲ್ಲ:ಲೋಕಸಭೆಗೆ ರಾಜನಾಥ ಹೇಳಿಕೆ

ಪಿಟಿಐ
Published 28 ಜುಲೈ 2025, 11:05 IST
Last Updated 28 ಜುಲೈ 2025, 11:05 IST
<div class="paragraphs"><p>ರಾಜನಾಥ ಸಿಂಗ್</p></div>

ರಾಜನಾಥ ಸಿಂಗ್

   

(ಪಿಟಿಐ ಚಿತ್ರ)

ನವದೆಹಲಿ: 'ಆಪರೇಷನ್ ಸಿಂಧೂರ' ನಿಲ್ಲಿಸಲು ಯಾವುದೇ ಒತ್ತಡ ಇರಲಿಲ್ಲ. ಸಶಸ್ತ್ರ ಪಡೆಗಳು ನಿರ್ದಿಷ್ಟ ರಾಜಕೀಯ-ಮಿಲಿಟರಿ ಗುರಿ ಸಾಧಿಸಿದ ಬಳಿಕ ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.

ADVERTISEMENT

ಸಂಸತ್ತಿನಲ್ಲಿ ಇಂದು (ಸೋಮವಾರ) ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದ ಚರ್ಚೆಯಲ್ಲಿ ಸರ್ಕಾರದ ನಿಲುವುಗಳನ್ನು ರಾಜನಾಥ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ಒಂದು ವೇಳೆ ಪಾಕಿಸ್ತಾನ ಮತ್ತೆ ದುಸ್ಸಾಹಸಕ್ಕೆ ಮುಂದಾದರೆ ಕಾರ್ಯಾಚರಣೆಯನ್ನು ಮತ್ತೆ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಪುರಾವೆಗಳು ನಮ್ಮ ಬಳಿ ಇವೆ...

'ಭಾರತದ ಗಡಿಗಳನ್ನು ರಕ್ಷಿಸಲು ಸಶಸ್ತ್ರ ಪಡೆಗಳು ಸದಾ ಸನ್ನದ್ಧವಾಗಿರುತ್ತವೆ. ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಲಾಯಿತು. ಈ ಪೈಕಿ ಏಳು ಭಯೋತ್ಪಾದಕ ಕೇಂದ್ರಗಳು ಸಂಪೂರ್ಣವಾಗಿ ನಾಶವಾಗಿವೆ' ಎಂದು ಅವರು ಹೇಳಿದ್ದಾರೆ.

'22 ನಿಮಿಷಗಳ ಕಾರ್ಯಾಚರಣೆಯಲ್ಲಿ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಲಾಯಿತು. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದೊಳಗೆ ನಡೆಸಿದ ಕಾರ್ಯಾಚರಣೆಯಲ್ಲಿ ಉಂಟಾದ ಹಾನಿಯ ಸಂಬಂಧ ಪುರಾವೆಗಳು ನಮ್ಮ ಬಳಿ ಇವೆ' ಎಂದು ಅವರು ಸದನಕ್ಕೆ ತಿಳಿಸಿದ್ದಾರೆ.

'ಆಪರೇಷನ್ ಸಿಂಧೂರ ಜಾರಿ ಮಾಡುವ ಮುನ್ನ ನಮ್ಮ ಪಡೆಗಳು ಪ್ರತಿಯೊಂದು ಅಂಶವನ್ನು ಪರಿಶೀಲಿಸಿ ಭಯೋತ್ಪಾದಕರ ಮೇಲೆ ಗರಿಷ್ಠ ಹಾನಿ ಮಾಡುವ ಜೊತೆಗೆ ಅಮಾಯಕ ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಲಾಯಿತು' ಎಂದು ಅವರು ತಿಳಿಸಿದ್ದಾರೆ.

ಒತ್ತಡ ಇರಲಿಲ್ಲ...

'ಒತ್ತಡಕ್ಕೆ ಒಳಗಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು ಎಂಬುವುದು ತಪ್ಪು ಹಾಗೂ ಆಧಾರರಹಿತವಾಗಿದೆ. ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಯ ಮಹಾನಿರ್ದೇಶಕರು ದಾಳಿ ಕೊನೆಗೊಳಿಸುವಂತೆ ವಿನಂತಿ ಮಾಡಿದ್ದರು' ಎಂದು ರಾಜನಾಥ ಸ್ಪಷ್ಟಪಡಿಸಿದ್ದಾರೆ.

'ಆಪರೇಷನ್ ಸಿಂಧೂರ ನಮ್ಮ ಶಕ್ತಿಯ ಸಂಕೇತವಾಗಿದ್ದು, ನಮ್ಮ ದೇಶದ ನಾಗರಿಕರಿಗೆ ಹಾನಿಯುಂಟು ಮಾಡಿದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದೇವೆ' ಎಂದು ರಾಜನಾಥ ಹೇಳಿದ್ದಾರೆ.

ವ್ಯಾಪಾರ ವಿಷಯವನ್ನು ಮುಂದಿಟ್ಟುಕೊಂಡು ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧ ಕೊನೆಗೊಳಿಸಲಾಯಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿಕೆ ನೀಡಿದ್ದರು. ಆದರೆ ಮೂರನೇ ದೇಶದ ಮಧ್ಯಪ್ರವೇಶವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.