ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಗುರಿಯಾಗಿಸಿ ಸಶಸ್ತ್ರ ಪಡೆ ನಡೆಸಿರುವ ದಾಳಿಯ ಕುರಿತು ವಿವರಿಸಲು ಕೇಂದ್ರ ಸರ್ಕಾರವು ನಾಳೆ (ಗುರುವಾರ) ಸರ್ವಪಕ್ಷ ಸಭೆ ಕರೆದಿದೆ.
ಈ ಕುರಿತು ಸಂಸದೀಯ ವ್ಯವಹಾರಗಳ ಸಚಿವರಾದ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ. ಸಂಸತ್ ಆವರಣದಲ್ಲಿ ಗುರುವಾರ ಬೆಳಿಗ್ಗೆ 11ಗಂಟೆಗೆ ಸಭೆ ನಡೆಯಲಿದೆ.
ಏತನ್ಮಧ್ಯೆ ಕೇಂದ್ರ ಸಂಪುಟ ಸಭೆಯ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ದಾಳಿಯ ಕುರಿತು ವಿವರಣೆ ನೀಡಿದ್ದಾರೆ.
ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆ 'ಆಪರೇಷನ್ ಸಿಂಧೂರ' ನಡೆಸಿ ಪರಾಕ್ರಮ ಮೆರೆದಿದೆ. ಆ ಮೂಲಕ ಪಾಕ್‌ಗೆ ತಕ್ಕ ತಿರುಗೇಟು ನೀಡಿದೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ದಾಳಿಕೋರರನ್ನು ಹಾಗೂ ಬೆಂಬಲಿಸಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಅಲ್ಲದೆ ಕಾರ್ಯಾಚರಣೆಯ ಗುರಿ ಹಾಗೂ ವಿಧ ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಪ್ರಧಾನಿ ನೀಡಿದ್ದರು.
ಸಿಂಧೂ ಜಲ ಒಪ್ಪಂದ ಅಮಾನತು ಸೇರಿದಂತೆ ಪಾಕ್ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿದ್ದ ಭಾರತ, ಎಲ್ಲ ರೀತಿಯ ರಾಜತಾಂತ್ರಿಕ ಬಾಂಧವ್ಯವನ್ನು ಕಡಿತುಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.