ADVERTISEMENT

Operation Sindoor: ನಿಯೋಗದಲ್ಲಿ ಶಶಿ ತರೂರ್; ಕಾಂಗ್ರೆಸ್ ಪಟ್ಟಿಯಲ್ಲಿಲ್ಲ ಹೆಸರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮೇ 2025, 7:48 IST
Last Updated 17 ಮೇ 2025, 7:48 IST
<div class="paragraphs"><p>ಶಶಿ ತರೂರ್</p></div>

ಶಶಿ ತರೂರ್

   

ಪಿಟಿಐ ಚಿತ್ರ

ನವದೆಹಲಿ: ಪಹಲ್ಗಾಮ್‌ ದಾಳಿಗೆ ‘ಆಪರೇಷನ್‌ ಸಿಂಧೂರ’ ಮೂಲಕ ಪ್ರತೀಕಾರ ತೆಗೆದುಕೊಂಡಿರುವ ಭಾರತದ ಕ್ರಮ ಹಾಗೂ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿವಿಧ ಪಕ್ಷಗಳ ಏಳು ಸಂಸದರ ನಿಯೋಗದ ಪಟ್ಟಿಗೆ ಸಂಸದ ಶಶಿ ತರೂರ್‌ ಅವರ ಹೆಸರನ್ನು ಕೇಂದ್ರ ಸರ್ಕಾರ ಸೇರಿಸಿದೆ. ಆದರೆ ಕಾಂಗ್ರೆಸ್ ಶಿಫಾರಸು ಮಾಡಿದ ಪಟ್ಟಿಯಲ್ಲಿ ಅವರ ಹೆಸರನ್ನು ಕೈಬಿಟ್ಟಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ADVERTISEMENT

‘ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮೇ 16ರಂದು ನಿಯೋಗಕ್ಕೆ ನಾಲ್ಕು ಸಂಸದರ ಹೆಸರು ಶಿಫಾರಸು ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೋರಿದ್ದರು. ಅದರಂತೆಯೇ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸೂಚನೆಯಂತೆ ಆನಂದ ಶರ್ಮಾ, ಗೌರವ್ ಗೊಗೊಯಿ, ಡಾ. ಸಯದ್ ನಾಸೀರ್ ಹುಸೇನ್‌ ಮತ್ತು ರಾಜ್‌ ಬ್ರಾರ್‌ ಅವರ ಹೆಸರುಗಳನ್ನು ಶಿಫಾರಸು ಮಾಡಿ ಶುಕ್ರವಾರ ಸಂಜೆಯೇ ಪಟ್ಟಿ ಕಳುಹಿಸಲಾಗಿದೆ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಆದರೆ ಸಂಸದೀಯ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ತಿರುವನಂತಪುರದ ಸಂಸದ ಕಾಂಗ್ರೆಸ್‌ನ ಶಶಿ ತರೂರ್‌ ಹೆಸರು ಮೊದಲನೆಯದಾಗಿದೆ. ಬಿಜೆಪಿ ಸಂಸದ ರವಿಶಂಕರ ಪ್ರಸಾದ್ ಮತ್ತು ಬೈಜಯಂತ್ ಪಾಂಡಾ, ಜೆಡಿಯು ಸಂಸದ ಸಂಜಯ್ ಜಾ, ಡಿಎಂಕೆ ಸಂಸದೆ ಕನಿಮೋಳಿ, ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ, ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ಅವರ ಹೆಸರುಗಳಿವೆ.

ಕಾಂಗ್ರೆಸ್‌ ಪಟ್ಟಿ ಪ್ರಶ್ನಾರ್ಹ: ಬಿಜೆಪಿ

‘ರಾಜತಾಂತ್ರಿಕ ಸಭೆಗಳಲ್ಲಿ ಭಾರತವನ್ನು ಪ್ರತಿನಿಧಿಸಲು ಕಾಂಗ್ರೆಸ್ ಶಿಫಾರಸು ಮಾಡಿರುವ ಹೆಸರುಗಳು ಅಚ್ಚರಿ ಮೂಡಿಸಿರುವುದು ಮಾತ್ರವಲ್ಲ, ಪ್ರಶ್ನಾರ್ಹವಾಗಿವೆ’ ಎಂದು ಬಿಜೆಪಿಯ ವಕ್ತಾರ ಅಮಿತ್ ಮಾಳವೀಯ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. 

ನಿಯೋಗಕ್ಕೆ ತಮ್ಮ ಹೆಸರನ್ನು ಸರ್ಕಾರ ಆಯ್ಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಶಶಿ ತರೂರ್, ‘ಇದು ನನಗೆ ದೊರೆತ ಗೌರವ. ದೇಶದ ಹಿತದೃಷ್ಟಿಯ ವಿಷಯ ಬಂದಾಗ ಹಾಗೂ ದೇಶಕ್ಕೆ ನಮ್ಮ ಸೇವೆಯ ಅಗತ್ಯ ಇದ್ದಾಗ ನಾವು ಬೇರೇನನ್ನೂ ಬಯಸುವುದು ಸರಿಯಲ್ಲ’ ಎಂದಿದ್ದಾರೆ.

ಆಪರೇಷನ್ ಸಿಂಧೂರ ಮತ್ತು ಗಡಿಯಲ್ಲಿನ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟ ಕುರಿತು ಸರ್ವಪಕ್ಷಗಳ ಏಳು ನಿಯೋಗಗಳು ಪ್ರಮುಖ ಮಿತ್ರ ರಾಷ್ಟ್ರಗಳಿಗೆ ಭೇಟಿ ನೀಡಲಿವೆ. ಜತೆಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯ ರಾಷ್ಟ್ರಗಳನ್ನೂ ಭೇಟಿ ಮಾಡಿ ಭಾರತದ ನಿಲುವನ್ನು ವಿವರಿಸಲಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಲಕ್ಷ್ಮಣ ರೇಖೆ ದಾಟುತ್ತಿದ್ದಾರೆ ತರೂರ್‌: ಕಾಂಗ್ರೆಸ್ ಮುಖಂಡರು

ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಕೊಂದ ನಂತರ ಭಾರತೀಯ ಸೇನೆಯು ಮೇ 7ರಂದು ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಈ ಸೇನಾ ಕಾರ್ಯಾಚರಣೆಯನ್ನು ಮತ್ತು ಕೇಂದ್ರದ ನಿಲುವನ್ನು ಸಂಸದ ಶಶಿ ತರೂರ್ ಮುಕ್ತಕಂಠದಿಂದ ಶ್ಲಾಘಿಸಿದ್ದರು. ತರೂರ್ ಅವರ ನಡೆಯನ್ನು ಆಡಳಿತಾರೂಢ ಬಿಜೆಪಿ ಬೆಂಬಲಿಸಿದರೆ, ತಮ್ಮದೇ  ಕಾಂಗ್ರೆಸ್‌ ಪಕ್ಷವು ಅಂತರ ಕಾಯ್ದುಕೊಂಡಿತ್ತು.

‘ಕದನ ವಿರಾಮ ಏಕೆ ಘೋಷಿಸಲಾಯಿತು? ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪಾರದರ್ಶಕತೆಯನ್ನು ಏಕೆ ಪ್ರದರ್ಶಿಸಿಲ್ಲ? ಕದನ ವಿರಾಮದಲ್ಲಿ ಅಮೆರಿಕದ ಪಾತ್ರವೇನು? ಎಂಬುದಕ್ಕೆ ಕೇಂದ್ರ ಸರ್ಕಾರದ ಬಳಿ ಉತ್ತರವಿಲ್ಲ. ಶಶಿ ತರೂರ್ ಅವರ ಪ್ರತಿಕ್ರಿಯೆಯು ಅವರ ವೈಯಕ್ತಿಕ ಹೇಳಿಕೆ’ ಎಂದು ಸುದ್ದಿಗೋಷ್ಠಿಯಲ್ಲಿ ಜೈರಾಮ್ ರಮೇಶ್ ಹೇಳಿದ್ದರು.

'ಆಗಾಗ್ಗ ಪಕ್ಷದ ನಿಲುವುಗಳಿಗೆ ವಿರುದ್ಧವಾಗಿ ಹೇಳಿಕೆ ನೀಡುತ್ತಿರುವ ಶಶಿ ತರೂರ್ ‘ಲಕ್ಷ್ಮಣ ರೇಖೆ’ಯನ್ನು ದಾಟುತ್ತಿದ್ದಾರೆ’ ಎಂದು ಪಕ್ಷದ ಕೆಲ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2014ರಿಂದಲೂ ಕಾಂಗ್ರೆಸ್ ಮತ್ತು ಶಶಿ ತರೂರ್ ನಡುವಿನ ತಿಕ್ಕಾಟ ನಡೆದಿದೆ. ಪಕ್ಷದ ವಕ್ತಾರರಾಗಿದ್ದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮೃದುಧೋರಣೆ ತೆಳೆದಿದ್ದಾರೆ ಎಂದು ಪಕ್ಷದ ವಕ್ತಾರ ಸ್ಥಾನದಿಂದ ಅವರನ್ನು ಕೈಬಿಡಲಾಗಿತ್ತು. 2020ರಲ್ಲಿ ಅವರು ಜಿ–23 ಗುಂಪಿನಲ್ಲಿ ಸ್ಥಾನ ಪಡೆದರು. ನಂತರ ಕಾಂಗ್ರೆಸ್‌ ಪಕ್ಷದೊಳಗೆ ಸಾಂಸ್ಥಿಕ ಸುಧಾರಣೆಗಳನ್ನು ತರಬೇಕು ಎಂಬ ಬೇಡಿಕೆ ಮುಂದಿಟ್ಟು ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. 2022ರಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರೂರ್ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಗಾಂಧಿ ಕುಟುಂಬ ಖರ್ಗೆ ಅವರನ್ನು ಬೆಂಬಲಿಸಿತ್ತು. ತರೂರ್ ಸುಮಾರು ಒಂದು ಸಾವಿರ ಮತಗಳನ್ನು ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.