ಚಂಡೀಗಢ: ಭಾರತದಲ್ಲಿದ್ದ ಪಾಕಿಸ್ತಾನ ಪ್ರಜೆಗಳು ಪಂಜಾಬ್‌ನ ಅಮೃತಸರದ ಅಟ್ಟಾರಿ– ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಮರಳುತ್ತಿರುವುದು ಶುಕ್ರವಾರ ಕೂಡ ಮುಂದುವರಿದಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಜೆಗಳಿಗೆ ಭಾರತ ತೊರೆಯಲು ಕೇಂದ್ರ ಸರ್ಕಾರ ಗುರುವಾರ 48 ಗಂಟೆಗಳ ಗಡುವು ನೀಡಿತ್ತು.
ಪಾಕಿಸ್ತಾನದವರನ್ನು ಮದುವೆಯಾಗಿದ್ದು, ಭಾರತದ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಕೆಲವು ಮಹಿಳೆಯರು ಅಗತ್ಯ ದಾಖಲೆಗಳಿದ್ದರೂ ಗಡಿ ದಾಟಲು ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಆರೋಪಿಸಿದ್ದಾರೆ.
‘ಭಾರತದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಬಂದಿದ್ದೆವು. ಆದರೆ, ಪಾಕಿಸ್ತಾನ ಪ್ರಜೆಗಳು ದೇಶ ತೊರೆಯಲು 48 ಗಂಟೆಗಳ ಗಡುವನ್ನು ಸರ್ಕಾರ ನಿಗದಿಪಡಿಸಿದ ನಂತರ ಅನಿವಾರ್ಯವಾಗಿ ಮರಳಬೇಕಾಗಿದೆ’ ಕೆಲವು ಮಹಿಳೆಯರು ಹೇಳಿದ್ದಾರೆ.
ಕರಾಚಿಯಲ್ಲಿ ಮದುವೆಯಾಗಿರುವ ಮಹಿಳೆಯೊಬ್ಬರು, ‘ಹೃದ್ರೋಗಿಯಾಗಿರುವ ತನ್ನ ತಾಯಿಯನ್ನು ಭೇಟಿಯಾಗಲು 15 ದಿನಗಳ ಮಟ್ಟಿಗೆ ದೆಹಲಿಗೆ ಬಂದಿದ್ದೆ. ಈಗ ನನಗೆ ಹಿಂತಿರುಗಲು ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ.
‘ನನ್ನ ಪತಿ ಮತ್ತು ಮಾವ ವಾಘಾ ಗಡಿಯ ಇನ್ನೊಂದು ಬದಿಯಲ್ಲಿ ನನಗಾಗಿ ಕಾಯುತ್ತಿದ್ದಾರೆ. ಆದರೆ, ನನಗೆ ಹಿಂತಿರುಗಲು ಅವಕಾಶ ನೀಡುತ್ತಿಲ್ಲ’ ಎಂದು ಭಾರತದ ಪಾಸ್‌ಪೋರ್ಟ್ ಹೊಂದಿರುವ ಶನಿಜಾ ಅಟ್ಟಾರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ನನ್ನ ಬಳಿ ಭಾರತದ ಪಾಸ್‌ಪೋರ್ಟ್ ಇದೆ. ನನ್ನ ಇಬ್ಬರು ಮಕ್ಕಳು ಪಾಕಿಸ್ತಾನದ ಪಾಸ್‌ಪೋರ್ಟ್ ಹೊಂದಿದ್ದಾರೆ. ನನ್ನ ವಿವಾಹ ಪ್ರಮಾಣ ಪತ್ರ ತೋರಿಸಿದರೂ ಅವರು ನಮ್ಮ ಮಾತನ್ನು ಕೇಳಲು ಸಿದ್ಧರಿಲ್ಲ. ಅವರು ಭಾರತದ ಪಾಸ್‌ಪೋರ್ಟ್ ಹೊಂದಿದವರಿಗೆ ಗಡಿ ದಾಟಲು ಅವಕಾಶ ನೀಡುತ್ತಿಲ್ಲ’ ಎಂದು ಮತ್ತೊಬ್ಬ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.