ಅಮಿತ್ ಶಾ
– ಪಿಟಿಐ ಚಿತ್ರ
ನವದೆಹಲಿ: ದೇಶ ತೊರೆಯಲು ನಿಗದಿಪಡಿಸಿದ ಗಡುವು ಮೀರಿ ಪಾಕಿಸ್ತಾನದ ಯಾವುದೇ ಪ್ರಜೆಯೂ ಭಾರತದಲ್ಲಿ ಉಳಿದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಶುಕ್ರವಾರ ಸೂಚಿಸಿದ್ದಾರೆ.
‘ವಿವಿಧ ರಾಜ್ಯಗಳಲ್ಲಿ ತಂಗಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ, ನಿಗದಿತ ಗಡುವಿನ ಒಳಗಾಗಿ ಅವರು ದೇಶ ತೊರೆಯುವುದನ್ನು ಖಚಿತಪಡಿಸಿಕೊಳ್ಳುವಂತೆ ಗೃಹ ಸಚಿವರು ಸೂಚಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
ಆದರೆ, ಪಾಕಿಸ್ತಾನದ ಹಿಂದೂ ಪ್ರಜೆಗಳಿಗೆ ಈಗಾಗಲೇ ನೀಡಲಾದ ದೀರ್ಘಾವಧಿ ವೀಸಾಗಳು ‘ಮಾನ್ಯವಾಗಿರುತ್ತವೆ’ ಮತ್ತು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದೂ ಹೇಳಿದ್ದಾರೆ. ಅಮಿತ್ ಶಾ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಖುದ್ದು ದೂರವಾಣಿ ಕರೆಮಾಡಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಗಡಿಯಾಚೆಗಿನ ನಂಟು ಇದೆ ಎಂದು ಹೇಳಿರುವ ಭಾರತ, ನೆರೆಯ ದೇಶದ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿಮೆ ಮಾಡಲು ತೀರ್ಮಾನಿಸಿತ್ತು.
ಪಾಕಿಸ್ತಾನಿ ಪ್ರಜೆಗಳಿಗೆ ನೀಡಿರುವ ವೀಸಾಗಳ ಅವಧಿ ಏಪ್ರಿಲ್ 27ರಂದು ಮುಕ್ತಾಯವಾಗಲಿದೆ. ವೈದ್ಯಕೀಯ ವೀಸಾ ಏ. 29ರವರೆಗೆ ಮಾತ್ರ ಊರ್ಜಿತವಾಗಿರಲಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಪ್ರಕಟಿಸಿತ್ತು. ಪಾಕಿಸ್ತಾನಕ್ಕೆ ತೆರಳಿರುವ ಭಾರತದ ಪ್ರಜೆಗಳು ಶೀಘ್ರವೇ ಸ್ವದೇಶಕ್ಕೆ ಮರಳಬೇಕೆಂದೂ ಸಲಹೆ ನೀಡಿತ್ತು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತ ಕೈಗೊಂಡ ಕ್ರಮಗಳ ಬಗ್ಗೆ ವಿವಿಧ ದೇಶಗಳ ರಾಯಭಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆಯ ಇಬ್ಬರು ಭಯೋತ್ಪಾದಕರ ಮನೆಗಳನ್ನು ದಕ್ಷಿಣ ಕಾಶ್ಮೀರದ ತ್ರಾಲ್ ಮತ್ತು ಬಿಜ್‌ಬೆಹರಾ ಪ್ರದೇಶಗಳಲ್ಲಿ ಧ್ವಂಸಗೊಳಿಸಲಾಯಿತು.
ಪುಲ್ವಾಮಾ ಜಿಲ್ಲೆಯ ತ್ರಾಲ್‌ನಲ್ಲಿ ಆಸಿಫ್ ಶೇಖ್‌ನ ಮನೆ ಹಾಗೂ ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಆದಿಲ್ ಥೋಕರ್‌ನ ಮನೆಯನ್ನು ಸ್ಫೋಟಕ ಬಳಸಿ ನೆಲಸಮಗೊಳಿಸಲಾಗಿದೆ. ಆದರೆ ಮನೆಗಳನ್ನು ಕೆಡವಿರುವ ಕುರಿತು ಭದ್ರತಾ ಪಡೆಗಳಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಥೋಕರ್‌ನ ಮನೆಯನ್ನು ಗುರುವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಧ್ವಂಸಗೊಳಿಸಲಾಗಿದೆ.
ಭದ್ರತಾ ಪಡೆಗಳು ಮನೆಯಲ್ಲಿ ಶೋಧ ನಡೆಸಿದಾಗ ಅಲ್ಲಿ ಸ್ಫೋಟಕಗಳಿರುವುದು ಪತ್ತೆಯಾಗಿದೆ. ಅದನ್ನು ಅಲ್ಲೇ ಸ್ಫೋಟಿಸಿದಾಗ ಮನೆ ನೆಲಸಮಗೊಂಡಿದೆ. ತ್ರಾಲ್‌ನ ಮೊಘಮಾ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಇದೇ ರೀತಿಯ ಕಾರ್ಯಾಚರಣೆಯಿಂದ ಆಸಿಫ್ ಶೇಖ್‌ನ ಮನೆ ಭಾಗಶಃ ಕುಸಿದಿದೆ. ಶೋಧ ಕಾರ್ಯಾಚರಣೆ ವೇಳೆ ಪೆಟ್ಟಿಗೆಯೊಂದರಲ್ಲಿ ಅನುಮಾನಾಸ್ಪದ ವಸ್ತು ದೊರೆತಿದೆ. ಅದನ್ನು ಪರಿಶೀಲಿಸಿದ ಸೇನೆಯ ಎಂಜಿನಿಯರ್‌ಗಳು ಸ್ಫೋಟಕ ಎಂಬುದನ್ನು ಖಚಿತಪಡಿಸಿದರು. ಅದನ್ನು ಅಲ್ಲೇ ನಾಶಪಡಿಸಿದಾಗ ಮನೆಯ ಒಂದು ಭಾಗ ಕುಸಿದಿದೆ. ಮನೆಗಳನ್ನು ಯಾವ ಆಧಾರದಲ್ಲಿ ನೆಲಸಮಗೊಳಿಸಲಾಗಿದೆ ಎಂಬುದು ಅಸ್ಪಷ್ಟವಾಗಿಯೇ ಉಳಿದಿದ್ದರೂ ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭದ್ರತಾ ಪಡೆಗಳು ಈ ಕಾರ್ಯಾಚರಣೆ ನಡೆಸಿವೆ ಎನ್ನಲಾಗಿದೆ.
ಆಸಿಫ್ ಮತ್ತು ಥೋಕರ್ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಲು ಅಧಿಕಾರಿಗಳು ಸ್ಥಳೀಯ ನಿವಾಸಿಗಳನ್ನು ಪ್ರಶ್ನಿಸಿದ್ದಾರೆ. ಪಹಲ್ಗಾಮ್ ದಾಳಿಯ ಪ್ರಮುಖ ಆರೋಪಿಗಳಲ್ಲಿ ಥೋಕರ್ ಒಬ್ಬನಾಗಿದ್ದು ಆತನ ಸುಳಿವು ನೀಡಿದವರಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ₹20 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಕೆಲವೆಡೆ ಪಾಕಿಸ್ತಾನ ಸೇನೆ ಗುರುವಾರ ರಾತ್ರಿ ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಪಹಲ್ಗಾಮ್ ದಾಳಿಯ ಬಳಿಕ ಉಭಯ ದೇಶಗಳ ಮಧ್ಯೆ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಸೇನೆಯ ಮೂಲಗಳು ತಿಳಿಸಿವೆ.
ಬೆಂಗಳೂರು: ರಾಜ್ಯದಲ್ಲಿ ಅಧಿಕೃತವಾಗಿ ಅನಧಿಕೃತವಾಗಿ ನೆಲಸಿರುವ ಪಾಕ್ ಪ್ರಜೆಗಳ ತಪಾಸಣೆಯನ್ನು ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಗಳು ನಡೆಸಲಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆ ದೇಶದ ಎಲ್ಲೆಡೆ ಇರುವ ಪಾಕ್ ಪ್ರಜೆಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಇದು ರಾಷ್ಟ್ರೀಯ ವಿಷಯವಾಗಿದ್ದು ಎಲ್ಲ ರಾಜ್ಯಗಳೂ ಸಹಕಾರ ನೀಡಲಿವೆ ಎಂದರು. ರಾಷ್ಟ್ರದ ಭದ್ರತೆ ವಿಷಯದಲ್ಲಿ ಕೇಂದ್ರ ತೆಗೆದುಕೊಂಡ ರಾಜತಾಂತ್ರಿಕ ನಿರ್ಧಾರಗಳು ಸ್ವಾಗತಾರ್ಹ. ಭಯೋತ್ಪಾದಕ ಪ್ರಕರಣಗಳು ಮರುಕಳಿಸದಂತೆ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಲಂಡನ್ : ಪಾಕಿಸ್ತಾನವು ಹಲವು ದಶಕಗಳಿಂದ ಭಯೋತ್ಪಾದಕರಿಗೆ ತರಬೇತಿ ಮತ್ತು ಹಣಕಾಸಿನ ನೆರವು ನೀಡುತ್ತಿದೆ ಎಂಬುದನ್ನು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ಸ್ಕೈ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಸಂದರ್ಶಕ ಯಾಲ್ದಾ ಹಕೀಮ್ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ‘ಭಯೋತ್ಪಾದನೆಗೆ ಬೆಂಬಲ ನೀಡುವ ಮೂಲಕ ಪಾಕಿಸ್ತಾನ ತಪ್ಪು ಮಾಡಿದೆ’ ಎಂದಿದ್ದಾರೆ.
‘ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವ ಸುದೀರ್ಘ ಇತಿಹಾಸವನ್ನು ಪಾಕಿಸ್ತಾನ ಹೊಂದಿದೆ ಎಂಬುದನ್ನು ನೀವು ಒಪ್ಪಿಕೊಳ್ಳುವಿರಾ’ ಎಂದು ಹಕೀಮ್ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಆಸಿಫ್ ‘ಹೌದು. ಅಮೆರಿಕ ಮತ್ತು ಬ್ರಿಟನ್ ಒಳಗೊಂಡಂತೆ ಪಶ್ಚಿಮದ ರಾಷ್ಟ್ರಗಳಿಗಾಗಿ ನಾವು ಸುಮಾರು ಮೂರು ದಶಕಗಳಿಂದ ಈ ಕೊಳಕು ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
‘ನಮ್ಮಿಂದ ತಪ್ಪಾಗಿದ್ದು ಅದರಿಂದಾಗಿ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಸೋವಿಯತ್ ಯೂನಿಯನ್ ವಿರುದ್ಧದ ಯುದ್ಧ ಮತ್ತು 9/11 ಘಟನೆಯ ನಂತರದ ಯುದ್ಧದಲ್ಲಿ (ಅಮೆರಿಕದ ನೇತೃತ್ವದಲ್ಲಿ ನಡೆದ ಭಯೋತ್ಪಾದನೆ ವಿರುದ್ಧದ ಜಾಗತಿಕ ಸಮರ) ಭಾಗವಹಿಸದಿದ್ದರೆ ಪಾಕಿಸ್ತಾನಕ್ಕೆ ಇಂತಹ ಇಕ್ಕಟ್ಟಿನ ಪರಿಸ್ಥಿತಿ ಎದುರಾಗುತ್ತಿರಲಿಲ್ಲ’ ಎಂದಿದ್ದಾರೆ. ‘ಈ ಪ್ರದೇಶದಲ್ಲಿ ಏನೇ ಸಂಭವಿಸಿದರೂ ಪಾಕಿಸ್ತಾನವನ್ನು ದೂಷಿಸಲಾಗುತ್ತಿದೆ. 80ರ ದಶಕದಲ್ಲಿ ನಾವು ಸೋವಿಯತ್ ಯೂನಿಯನ್ ವಿರುದ್ಧ ಯುದ್ಧ ಮಾಡುತ್ತಿದ್ದಾಗ ಈಗಿನ ಈ ಎಲ್ಲಾ ಭಯೋತ್ಪಾದಕರು ಅಂದು ವಾಷಿಂಗ್ಟನ್‌ನಲ್ಲಿ ಮದ್ಯ ಸೇವಿಸಿ ಮೋಜು ಮಾಡುತ್ತಿದ್ದರು’ ಎಂದು ಆರೋಪಿಸಿದ್ದಾರೆ.
‘9/11 ಘಟನೆಯ ಬಳಿಕವೂ ಅಂತಹದೇ ಪರಿಸ್ಥಿತಿ ಪುನರಾವರ್ತನೆಯಾಯಿತು. ನಮ್ಮ ಸರ್ಕಾರಗಳೂ ತಪ್ಪು ಮಾಡಿವೆ ಎಂದು ಭಾವಿಸುತ್ತೇನೆ. ಕೆಲವು ದೇಶಗಳು ತಮ್ಮ ಹಿತಾಸಕ್ತಿ ಕಾಪಾಡಲು ಪಾಕಿಸ್ತಾನವನ್ನು ದಾಳವಾಗಿ ಬಳಸಿಕೊಂಡವು’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.