ಪಹಲ್ಗಾಮ್ ದಾಳಿಕೋರರ ರೇಖಾಚಿತ್ರ
ಪಿಟಿಐ ಚಿತ್ರ
ಶ್ರೀನಗರ: ಭಾರತೀಯ ಭದ್ರತಾ ಏಜೆನ್ಸಿಗಳು ಕಲೆಹಾಕಿದ ಮಾಹಿತಿ ಸೇರಿದಂತೆ ಪಾಕಿಸ್ತಾನ ಸರ್ಕಾರ ನೀಡಿದ ದಾಖಲೆಗಳು ಮತ್ತು ಬಯೋಮೆಟ್ರಿಕ್ ಮಾಹಿತಿಗಳ ಬಗ್ಗೆ ತನಿಖೆ ನಡೆಸಿದಾಗ ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಮೂವರೂ ಪಾಕಿಸ್ತಾನಿ ಮೂಲದವರು ಎನ್ನುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಉಗ್ರಗಾಮಿಗಳನ್ನು ಲಷ್ಕರ್– ಎ–ತಯಬಾದ (ಎಲ್‌ಇಟಿ) ಹಿರಿಯ ಕಾರ್ಯಕರ್ತರು ಎಂದು ಗುರುತಿಸಲಾಗಿದೆ. ಇವರು ಜುಲೈ 28ರಂದು ಶ್ರೀನಗರದ ಹೊರವಲಯದ ಡಚಿಗಮ್ ಅರಣ್ಯ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆದಗಳು ನಡೆಸಿದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾರೆ. ಇವರು ಏಪ್ರಿಲ್ 22ರಂದು ದಾಳಿ ನಡೆಸಿದ ಬಳಿಕ ಡಚಿಗಮ್–ಹರ್ವಾನ್ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದರು.
ಪಾಕಿಸ್ತಾನದ ರಾಷ್ಟ್ರೀಯ ಮಾಹಿತಿ ಮತ್ತು ನೋಂದಣಿ ಪ್ರಾಧಿಕಾರದ ಬಯೋಮೆಟ್ರಿಕ್ ದಾಖಲು, ಮತದಾರರ ಗುರುತಿನ ಚೀಟಿಗಳು ಮತ್ತು ಡಿಜಿಟಲ್ ಸ್ಯಾಟಲೈಟ್ ಫೋನ್ ಮಾಹಿತಿ, ಲಾಗ್‌ಗಳು ಮತ್ತು ಜಿಪಿಎಸ್ ವೇ ಪಾಯಿಂಟ್‌ಗಳು ಸೇರಿದಂತೆ, ಭದ್ರತಾ ಸಂಸ್ಥೆಗಳು ಸಂಗ್ರಹಿಸಿದ ಪ್ರಮುಖ ಪುರಾವೆಗಳಲ್ಲಿ ಮೂವರು ಭಯೋತ್ಪಾದಕರು ಪಾಕಿಸ್ತಾನದ ರಾಷ್ಟ್ರೀಯತೆ ಹೊಂದಿರುವುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ಯಾಲಿಸ್ಟಿಕ್ಸ್ ಆಯುಧ– ಬುಲೆಟ್‌ಗಳ ಹೊಂದಾಣಿಕೆ, ಬಂಧಿತ ಇಬ್ಬರು ಕಾಶ್ಮೀರಿ ಸಹಾಯಕರ ಹೇಳಿಕೆಗಳು ಸೇರಿದಂತೆ ಎನ್‌ಕೌಂಟರ್ ನಂತರದ ತನಿಖೆಯು ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರ ಭಾಗಿಯಾಗುವಿಕೆಯನ್ನು ದೃಢಪಡಿಸಿದೆ ಎಂದು ಅವರು ಹೇಳಿದರು.
ಮೂವರು ಉಗ್ರರನ್ನು, ಸುಲೇಮಾನ್ ಶಾ ಅಲಿಯಾಸ್ ‘ಫೈಜಲ್ ಜತ್’ ಈತ ಎ++ ವಿಭಾಗದ ಉಗ್ರನಾಗಿದ್ದು, ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದಾನೆ. ಈತನ ಆಪ್ತ ಅಬು ಹಮಾಜ್ ಅಲಿಯಾಸ್ ಅಫ್ಘಾನ್, ಈತ ಎ ಗ್ರೇಡ್ ಕಮಾಂಡರ್. ಮತ್ತೋರ್ವ ಯಾಸಿರ್ ಅಲಿಯಾಸ್ ಜಿಬ್ರಾನ್ ಈತ ಕೂಡ ಎ ಗ್ರೇಡ್ ಕಮಾಂಡರ್ ಆಗಿದ್ದಾನೆ ಎಂದು ಉಗ್ರರ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.