
ಎಂ.ಕೆ.ಸ್ಟಾಲಿನ್ ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ
ಕೊಯಂಬತ್ತೂರ್: ಚುಣಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ಏಕಷ್ಟು ಆತಂಕ? ಏತಕ್ಕಾಗಿ ಅರಚಾಟ? ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಕೇಳಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಒಂದು ತಿಂಗಳ ಸಮಯ ಸಾಲದು ಎಂಬ ಡಿಎಂಕೆ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ, ‘ಪಟ್ಟಿ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗಕ್ಕೆ ಒಂದು ತಿಂಗಳ ಅವಧಿ ಸಾಕು’ ಎಂದಿದ್ದಾರೆ.
‘ಚುನಾವಣೆ ನಡೆಯುವ ಐದು ದಿನಗಳ ಮೊದಲು ಪ್ರತಿ ಮನೆಗೂ ಬೂತ್ ಚೀಟಿಗಳನ್ನು ವಿತರಿಸಲು ಚುನಾವಣಾ ಸಿಬ್ಬಂದಿಗೆ ಸಾಧ್ಯವಾಗುವುದಾದರೆ, 30 ದಿನಗಳಲ್ಲಿ ಪಟ್ಟಿ ಪರಿಷ್ಕರಿಸಿ, ಮಾಹಿತಿ ದಾಖಲಿಸಲು ಸಾಧ್ಯವಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
‘ಮತದಾರರ ಪಟ್ಟಿಯ ಪರಿಷ್ಕರಣೆ ವಿಷಯದಲ್ಲಿ ಡಿಎಂಕೆ ಹಾಗೂ ಅದರ ಮಿತ್ರ ಪಕ್ಷಗಳು ಎಸ್‌ಐಆರ್ ಹೆಸರಿನಲ್ಲಿ ಏಕೆ ಅರಚುತ್ತಿವೆ? ಅವರಿಗೆ ಶುದ್ಧವಾದ ಮತದಾರರ ಪಟ್ಟಿ ಬೇಡವೇ?’ ಎಂದು ಕೇಳಿದ್ದಾರೆ.
‘ಕ್ಷೇತ್ರದ ವ್ಯಾಪ್ತಿಯಿಂದ ಹೊರಹೋದವರು, ನಿಧನರಾದವರ ಹೆಸರುಗಳನ್ನು ಕೈಬಿಟ್ಟು, ಹೊಸದಾಗಿ ಬಂದವರ ಹೆಸರುಗಳನ್ನು ಸೇರಿಸುವ ಮತದಾರರ ಪಟ್ಟಿಯ ಪರಿಷ್ಕರಣೆ ಬಹುಮುಖ್ಯ. ಒಂದೊಮ್ಮೆ ಆ ಎಲ್ಲಾ ಮತದಾರರ ಹೆಸರುಗಳು ಪಟ್ಟಿಯಲ್ಲಿರಬೇಕೆಂದು ಡಿಎಂಕೆ ಬಯಸಿದರೆ, ಆಗ ಅದು ಬೋಗಸ್ ಮತದಾನಕ್ಕೆ ಉತ್ತೇಜನ ನೀಡುತ್ತಿದೆ ಎಂದರ್ಥ’ ಎಂದು ಪಳನಿಸ್ವಾಮಿ ಹೇಳಿದ್ದಾರೆ.
‘ರಾಜ್ಯದ ಪೊಲೀಸ್ ಮಹಾನಿರ್ದೇಶಕರ ನೇಮಕಕ್ಕೆ ರಾಜ್ಯ ಸರ್ಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದೆ. ಮುಖ್ಯಸ್ಥರೇ ಇಲ್ಲದ ಕಾರಣ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಇಲಾಖೆ ಪರದಾಡುತ್ತಿದೆ’ ಎಂದೂ ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.