ADVERTISEMENT

2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ AIADMKಯಿಂದ ಮೆಗಾ ಮೈತ್ರಿ: ಪಳನಿಸ್ವಾಮಿ

ಪಿಟಿಐ
Published 17 ಫೆಬ್ರುವರಿ 2025, 5:51 IST
Last Updated 17 ಫೆಬ್ರುವರಿ 2025, 5:51 IST
<div class="paragraphs"><p>ಎಡಪ್ಪಾಡಿ ಪಳನಿಸ್ವಾಮಿ</p></div>

ಎಡಪ್ಪಾಡಿ ಪಳನಿಸ್ವಾಮಿ

   

ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ನೇತೃತ್ವದಲ್ಲಿ ಅತಿ ದೊಡ್ಡ ಮೈತ್ರಿಕೂಟ ರಚನೆಯಾಗಲಿದೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ.

ವೆಲ್ಲೂರು ಜಿಲ್ಲೆಯಲ್ಲಿ ಪಕ್ಷದ ಯುವ ಮೋರ್ಚಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣಾ ಮೈತ್ರಿ ಮತ್ತು ಪಕ್ಷದ ಸಿದ್ದಾಂತ ಎರಡು ವಿಭಿನ್ನ ವಿಷಯಗಳಾಗಿವೆ. ಮತ ವಿಭಜನೆಯನ್ನು ತಡೆದು ಚುನಾವಣೆ ಗೆಲ್ಲುವುದಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಆಡಳಿತಾರೂಢ ಡಿಎಂಕೆ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ವಿಜಯದ ಮೈತ್ರಿ ಮಾಡಿಕೊಳ್ಳಲಿದ್ದೇವೆ’ ಎಂದು ಹೇಳಿದರು.

ಎಐಎಡಿಎಂಕೆಯೊಂದಿಗೆ ಮೈತ್ರಿ ಸಾಧ್ಯವಿಲ್ಲ ಎಂದು ನಟ, ರಾಜಕಾರಣಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೇಳಿದ ಮೇಲೂ ಎಐಎಡಿಎಂಕೆ ಮುಖಂಡರಿಂದ ಈ ಹೇಳಿಕೆ ಬಂದಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಸ್ಟಾಲಿನ್‌ ವಿರುದ್ಧ ವಾಗ್ದಾಳಿ:

ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ ಪಳನಿಸ್ವಾಮಿ, ‘ರಾಜ್ಯದ ಯುವ ಜನತೆ ತಮ್ಮನ್ನು ‘ಅಪ್ಪ’ ಎಂದು ಪ್ರೀತಿಯಿಂದ ಕರೆಯುತ್ತಾರೆ ಎಂದು ಸ್ಟಾಲಿನ್‌ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳ ‘ಅಪ್ಪ’ ಎಂಬ ಕೂಗು ಮುಖ್ಯಮಂತ್ರಿಗೆ ಕೇಳಿಸುತ್ತಿಲ್ಲವೇ?’ ಎಂದು ಕೇಳಿದ್ದಾರೆ.

ಡಿಎಂಕೆ ಅವಕಾಶವಾದಿ ಪಕ್ಷವಾಗಿದ್ದು, ಸಂದರ್ಭಕ್ಕೆ ತಕ್ಕಂತೆ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುತ್ತದೆ. ಅಧಿಕಾರ ಹಿಡಿಯಲು ತನ್ನ ಸಿದ್ದಾಂತದ ಜೊತೆ ರಾಜಿ ಮಾಡಿಕೊಳ್ಳಲು ಅದು ಹಿಂಜರಿಯುದಿಲ್ಲ ಎಂದು ಕಿಡಿಕಾರಿದ್ದಾರೆ.

‘ದ್ವಿಭಾಷಾ ಸೂತ್ರಕ್ಕೆ ಬದ್ಧ’

ರಾಜ್ಯಗಳಿಗೆ ಶೈಕ್ಷಣಿಕ ನಿಧಿ ಬಿಡುಗಡೆ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಮತ್ತು ತ್ರಿಭಾಷಾ ನಿಯಮಾವಳಿ ಜಾರಿಗೆ ತರಬೇಕೆಂದು ಕೇಂದ್ರ ಒತ್ತಾಯ ಹೇರುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡು ದ್ವಿಭಾಷಾ ನೀತಿ(ತಮಿಳು ಮತ್ತು ಇಂಗ್ಲಿಷ್) ಅನುಸರಿಸುತ್ತಿದ್ದು, ಎಐಎಡಿಎಂಕೆ ಆ ನೀತಿಗೆ ಬದ್ಧವಾಗಿದೆ. ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ರಾಜ್ಯಕ್ಕೆ ಬರಬೇಕಾದ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.