ADVERTISEMENT

ರಾಹುಲ್‌ಗೆ ಮಾತನಾಡಲು ಅವಕಾಶ ನೀಡುವಂತೆ ಗದ್ದಲ:ಲೋಕಸಭೆ–ರಾಜ್ಯಸಭೆ ಕಲಾಪ ಮುಂದೂಡಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 7:23 IST
Last Updated 9 ಫೆಬ್ರುವರಿ 2026, 7:23 IST
<div class="paragraphs"><p>ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸದಸ್ಯರು ಸ್ಪೀಕರ್‌ ಪೀಠದ ಮುಂದೆ ಪ್ರತಿಭಟನೆ ನಡೆಸಿದರು&nbsp; </p></div>

ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸದಸ್ಯರು ಸ್ಪೀಕರ್‌ ಪೀಠದ ಮುಂದೆ ಪ್ರತಿಭಟನೆ ನಡೆಸಿದರು 

   

–ಪಿಟಿಐ ಚಿತ್ರ

ನವದೆಹಲಿ: ಕೇಂದ್ರ ಬಜೆಟ್ ಮೇಲಿನ ಚರ್ಚೆಗೆ ಮುನ್ನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದರಿಂದ ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.

ADVERTISEMENT

ಲೋಕಸಭೆಯಲ್ಲಿ ಸದನದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ಪ್ರಸಾದ್ ಟೆನ್ನೇಟಿ ಅವರು ಬಜೆಟ್ ಮೇಲಿನ ಚರ್ಚೆ ಆರಂಭಿಸುವಂತೆ ಕಾಂಗ್ರೆಸ್‌ ಸಂಸ‌ದ ಶಶಿ ತರೂರ್ ಅವರಿಗೆ ಸೂಚಿಸುತ್ತಿದ್ದಂತೆ, ವಿಪಕ್ಷ ನಾಯಕರು ಮೊದಲು ರಾಹುಲ್‌ ಗಾಂಧಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

'ಚರ್ಚೆ ಬಜೆಟ್ ಕುರಿತಾಗಿದ್ದು, ತರೂರ್ ಅವರ ಹೆಸರನ್ನು ಕಾಂಗ್ರೆಸ್ ಪ್ರಮುಖ ಭಾಷಣಕಾರರನ್ನಾಗಿ ನೀಡಿದೆ. ಲೋಕಸಭೆ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಬಹುದೇ ಎಂಬುದರ ಕುರಿತು ಸ್ಪಷ್ಟತೆ ಪಡೆಯಬೇಕಾಗಿದೆ. ಬಜೆಟ್ ಕುರಿತು ಮಾತನಾಡಲು ಬಯಸುತ್ತೀರಾ... ಎಂದು ರಾಹುಲ್‌ ಅವರನ್ನು ಟೆನ್ನೇಟಿ ಕೇಳಿದರು. ಏತನ್ಮಧ್ಯೆ, ವಿಪಕ್ಷ ನಾಯಕರು ಪ್ರತಿಭಟನೆಗೆ ಮುಂದಾದರು.

ಇದಕ್ಕೂ ಮೊದಲು ಸ್ಪೀಕರ್ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನ 12ರವರೆಗೆ ಮುಂದೂಡಿದ್ದರು.

ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆ ಕಳೆದ ಗುರುವಾರವೇ ಆರಂಭವಾಗಬೇಕಿತ್ತು. ವಿಪಕ್ಷಗಳ ಪ್ರತಿಭಟನೆಯಿಂದಾಗಿ ನಡೆಯಲಿಲ್ಲ.

ಚೀನಾದೊಂದಿಗಿನ ಸಂಘರ್ಷ ಕುರಿತಂತೆ ರಾಹುಲ್‌ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡದ್ದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳ ಸಂಸದರು ಪ್ರತಿಭಟಿಸಿದರು. ಇದರಿಂದಾಗಿ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಲೋಕಸಭೆಯಲ್ಲಿ ಉತ್ತರ ನೀಡಲಿಲ್ಲ.

ರಾಹುಲ್ ಅವರಿಗೆ ಮಾತನಾಡಲು ಅವಕಾಶ ನೀಡದ್ದನ್ನು ಪ್ರತಿಭಟಿಸಿದ್ದಕ್ಕಾಗಿ 8 ಸಂಸದರನ್ನು ಅಮಾನತು ಮಾಡಲಾಗಿದೆ. ಈ ಕುರಿತ ಹೋರಾಟದಿಂದ ವಿಪಕ್ಷಗಳ ಸಂಸದರು ಹಿಂದೆ ಸರಿಯುವ ಸಾಧ್ಯತೆಯೂ ಕಡಿಮೆ.

ಬಜೆಟ್‌ ಅಧಿವೇಶನದ ಮೊದಲ ಹಂತವು ಇದೇ ಶುಕ್ರವಾರ ಅಂತ್ಯಗೊಳ್ಳಲಿದೆ. ನಂತರ, ವಿವಿಧ ಸಚಿವಾಲಯಗಳ ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದ್ದು, ಏಪ್ರಿಲ್‌ 12ರಂದು ಅಧಿವೇಶನ ಮುಕ್ತಾಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.