ADVERTISEMENT

ರಾಜ್ಯಸಭೆಯಲ್ಲಿ ತೀವ್ರ ಗದ್ದಲ: ಪ್ರತಿಪಕ್ಷಗಳ 19 ಸಂಸದರು ಅಮಾನತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2022, 14:28 IST
Last Updated 26 ಜುಲೈ 2022, 14:28 IST
ಚಿತ್ರ ಕೃಪೆ – ಪಿಟಿಐ
ಚಿತ್ರ ಕೃಪೆ – ಪಿಟಿಐ   

ನವದೆಹಲಿ:ರಾಜ್ಯಸಭೆಯ ಕಲಾಪಕ್ಕೆ ಅಡ್ಡಿಪಡಿಸಿದ ಮತ್ತು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕೆ ವಿರೋಧ ಪಕ್ಷಗಳ ಒಟ್ಟು 19 ಸಂಸದರನ್ನು ಮಂಗಳವಾರರಾಜ್ಯಸಭೆಯಿಂದ ಒಂದು ವಾರದ ಅವಧಿಗೆ ಅಮಾನತುಗೊಳಿಸಲಾಗಿದೆ. ಲೋಕಸಭೆಯಲ್ಲಿ ಕಲಾಪಕ್ಕೆ ಅಡ್ಡಿಪ‍ಡಿಸಿದರೆಂದು ಕಾಂಗ್ರೆಸ್‌ನ ನಾಲ್ವರು ಸಂಸದರನ್ನು ಸೋಮವಾರ ಅಮಾನತುಗೊಳಿಸಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.

ಅಮಾನತುಗೊಂಡವರಲ್ಲಿತೃಣಮೂಲ ಕಾಂಗ್ರೆಸ್‌ನ ಏಳು ಸಂಸದರು, ಡಿಎಂಕೆಯ ಆರು ಸಂಸದರು, ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‌ಎಸ್) ಮೂವರು, ಸಿಪಿಐಎಂನಇಬ್ಬರು ಹಾಗೂ ಸಿಪಿಐನ ಒಬ್ಬ ಸಂಸದರೂ ಸೇರಿದ್ದಾರೆ. ಟಿಎಂಸಿಯ ಸಂಸದರಾದ ಸುಶ್ಮಿತಾ ದೇವ್‌, ಅಬಿರ್‌ ರಂಜನ್‌ ಬಿಸ್ವಾಸ್‌, ಡಿಎಂಕೆಯ ಕನಿಮೋಳಿ ಎನ್‌.ವಿ.ಎನ್‌. ಸೋಮು, ಟಿಆರ್‌ಎಸ್‌ನ ಬಿ.ಲಿಂಗಯ್ಯ ಯಾದವ್‌ ಅವರಂತಹ ಪ್ರಮುಖರು ಇದ್ದಾರೆ.

‘ಸಾಮೂಹಿಕ ನಾಶ ಶಸ್ತ್ರಾಸ್ತ್ರಗಳು ಹಾಗೂ ಅವುಗಳ ವಿತರಣಾ ವ್ಯವಸ್ಥೆಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ಕಾಯ್ದೆ’ ತಿದ್ದುಪಡಿ ಮಸೂದೆ 2022ರ ಬಗ್ಗೆ ಚರ್ಚೆ ಮುಂದುವರಿಸಲು ಕಲಾಪದಲ್ಲಿ ನಿರ್ಧರಿಸಿದಾಗ, ವಿರೋಧ ಪಕ್ಷಗಳ ಸದಸ್ಯರುಬೆಲೆ ಏರಿಕೆ ಬಗ್ಗೆ ತಕ್ಷಣ ಚರ್ಚೆ ನಡೆಸಬೇಕೆಂದು ಒತ್ತಾಯಿಸಿ ಸಭಾಧ್ಯಕ್ಷರ ಪೀಠದ ಎದುರು ಜಮಾಯಿಸಿದರು.ಸಭಾಧ್ಯಕ್ಷರ ಪೀಠದಲ್ಲಿ ಆಸೀನರಾಗಿದ್ದ ಉಪಸಭಾಪತಿ ಹರಿವಂಶ ಅವರು ಕಲಾಪ ಸುಗಮವಾಗಿ ನಡೆಸಲು ಅವಕಾಶ ನೀಡುವಂತೆ ಮಾಡಿದ ಮನವಿಗೆ ಕಿವಿಗೊಡದ ಕಾರಣ, ಸಂಸದರನ್ನು ಅಮಾನತುಗೊಳಿಸಿದರು.

ಇದಕ್ಕೂ ಮೊದಲು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಅವರು 10 ಸಂಸದರನ್ನು ಅಮಾನತುಗೊಳಿಸುವ ನಿರ್ಣಯ ಮಂಡಿಸಿದರು. ಇದು ಧ್ವನಿ ಮತದಿಂದ ಅಂಗೀಕಾರವಾದಾಗ, ಉಪಸಭಾಪತಿ ಹರಿವಂಶ್ ಅವರು ಅಮಾನತುಗೊಳಿಸಲಾದ 19 ಸಂಸದರ ಹೆಸರು ಪ್ರಕಟಿಸಿದರು. ‘ಸಂಸತ್‌ನ ಸದಸ್ಯರು ಕಲಾಪ ಮತ್ತು ಸಭಾಪತಿ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕೆ ಅಮಾನತು ಮಾಡಲಾಗಿದೆ’ ಎಂದರು.

ಅಮಾನತಾದ ಸದಸ್ಯರಿಗೆ ಕಲಾಪದಿಂದ ಹೊರ ನಡೆಯಲು ಹರಿವಂಶ್‌ ಅವರು ಸೂಚಿಸಿದಾಗ, ನಿರಾಕರಿಸಿದ ಸದಸ್ಯರು ಸಭಾಪತಿ ಪೀಠದ ಎದುರು ಪ್ರತಿಭಟಿಸಿದರು. ಇದರಿಂದ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು.

ರಾಜ್ಯಸಭೆಯಲ್ಲಿ ಒಂದೇಸಲಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಅಮಾನತುಗೊಳಿಸಿರುವುದು ದಾಖಲೆ. ಕಳೆದ ವರ್ಷದ ನವೆಂಬರ್‌ನಲ್ಲಿ ಚಳಿಗಾಲದ ಅಧಿವೇಶನದ ಮೊದಲ ದಿನವೇ, ಆಗಸ್ಟ್‌ನಲ್ಲಿ ಮುಂಗಾರು ಅಧಿವೇಶನದಲ್ಲಿ ಪ್ರತಿಭಟಿಸಿದ ಕಾರಣಕ್ಕೆ 12 ಸಂಸದರನ್ನು ಅಮಾನತುಗೊಳಿಸಲಾಗಿತ್ತು.ಅಧಿವೇಶನದ ಕೊನೆ ಟಿಎಂಸಿ ಸಂಸದ ಡೆರೆಕ್‌ ಒಬ್ರಿಯಾನ್‌ ಅವರನ್ನು ಅಮಾನತುಗೊಳಿಸಿದ್ದರಿಂದ ಅಮಾನತು ಆದವರ ಒಟ್ಟು ಸಂಖ್ಯೆ 13 ಆಗಿತ್ತು.

2020ರ ಮುಂಗಾರು ಅಧಿವೇಶನದಲ್ಲಿ ಕೃಷಿ ಕಾನೂನುಗಳನ್ನು ಅಂಗೀಕರಿಸುವಾಗ ದುರ್ವರ್ತನೆ ತೋರಿದ ಕಾರಣಕ್ಕೆ ಏಳು ಸಂಸದರನ್ನು ಅಮಾನತುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.