ಚಿರಾಗ್ ಪಾಸ್ವಾನ್ ಹಾಗೂ ಪ್ರಶಾಂತ್ ಕಿಶೋರ್
–ಪಿಟಿಐ ಚಿತ್ರಗಳು
ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಇಬ್ಬರು ಪ್ರಮುಖ ನಾಯಕರಾದ ಎಲ್‌ಜೆಪಿ (ಆರ್‌ವಿ)ಯ ಚಿರಾಗ್ ಪಾಸ್ವಾನ್ ಹಾಗೂ ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದಾರೆ.
‘ಬಿಹಾರ ಮೊದಲು’ ಎಂದು ಪ್ರಚಾರದ ಮೂಲಕ ಪಾಸ್ವಾನ್ (42) ಹಾಗೂ ಕಿಶೋರ್ (47) ತಮ್ಮನ್ನು ತಾವು ಮುಖ್ಯಮಂತ್ರಿ ಅಭ್ಯರ್ಥಿಗಳು ಎಂದು ಬಿಂಬಿಸಿಕೊಂಡಿದ್ದರು. ಅಲ್ಲದೆ ನಿತೀಶ್ ಕುಮಾರ್ ಅವರ ಜೆಡಿಯು ಹಾಗೂ ಲಾಲೂ ಪ್ರಸಾದ್– ತೇಜಸ್ವಿ ಯಾದವ್ ಅವರ ಆರ್‌ಜೆಡಿ ಪಕ್ಷವನ್ನೂ ಇಕ್ಕಟ್ಟಿಗೂ ಸಿಲುಕಿಸಿದ್ದರು.
35 ವರ್ಷಗಳು ಬಿಹಾರದ ರಾಜಕೀಯವನ್ನು ಹಿಡಿತದಲ್ಲಿಟ್ಟುಕೊಂಡು ಈಗ ರಾಜಕೀಯದ ಸಂಧ್ಯಾಕಾಲದಲ್ಲಿರುವ ನಿತೀಶ್ ಹಾಗೂ ಲಾಲೂ ಪ್ರಭಾವದ ನಡುವೆಯೇ ಪಾಸ್ವಾನ್ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಭಾರಿ ಬದಲಾವಣೆಯ ನಿರೀಕ್ಷೆಯಲ್ಲಿರುವ ಪ್ರಶಾಂತ್ ಕಿಶೋರ್ ಕೂಡ ತಾನು ಆರ್‌ಜೆಡಿಯ ತೇಜಸ್ವಿಗೆ ಪ್ರತಿಸ್ಪರ್ಧಿ ಎಂದು ಬಿಂಬಿತವಾಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಯು ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೂ, ಈ ವರ್ಷದ ಜೂನ್ ಆದಿಯಲ್ಲಿ ಪಾಸ್ವಾನ್ ಅವರು ನಿತೀಶ್ ಅವರ ಪ್ರಭಾವ ಇರುವ ಸ್ಥಳಗಳಲ್ಲಿ ಸಮಾವೇಶಗಳನ್ನು ನಡೆಸಿದ್ದರು. ಚುನಾವಣೆಯಲ್ಲಿ ತಾನೂ ಸ್ಪರ್ಧಿಸುವುದಾಗಿಯೂ ಹೇಳಿದ್ದರು. ಅವರ ಭಾವ, ಸಂಸದ ಅರುಣ್ ಭಾರತಿ ಕೂಡ ಈ ಬಗ್ಗೆ ‘ಎಕ್ಸ್’ನಲ್ಲಿ ಮೊದಲು ಸುಳಿವು ನೀಡಿದ್ದರು.
ಜೂನ್–ಜುಲೈನಲ್ಲಿ ಅರ್ರಾಹ್ ಹಾಗೂ ಸರಾನ್‌ನಲ್ಲಿ ಸಡೆಸಿದ ಸಮಾವೇಶದಲ್ಲೂ ತಾನು ಮುಂಬರುವ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದ್ದರು. ಬಿಹಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದ ಅವರು, ‘ಬಿಹಾರ ಮೊದಲು, ಬಿಹಾರಿ ಮೊದಲು’ ಎಂದು ಹೇಳಿದ್ದರು. ಪಾಸ್ವಾನ್ ಅವರ ನಡೆಗಳನ್ನು ಜೆಡಿಯು ಅನುಮಾನಿಸುತ್ತಲೇ ಬಂದಿತ್ತು. ಜೆಡಿಯುನ ಕ್ಷೇತ್ರಗಳನ್ನು ಎಲ್‌ಜೆಪಿ (ಆರ್‌ವಿ)ಗೆ ಬಿಟ್ಟುಕೊಡಬೇಕಾಗಿ ಬರಬಹುದು ಎಂದು ನಿತೀಶ್ ಅಸಮಾಧಾನಗೊಂಡಿದ್ದರು.
ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಎನ್‌ಡಿಒ ಒಕ್ಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಸುವುದು ಬೇಡವೆಂದು ಪಾಸ್ವಾನ್ ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಅಲ್ಲದೆ 2020ರ ಚುನಾವಣೆಯಲ್ಲಿ 137 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಲ್‌ಜೆಪಿ ಹಲವು ಕ್ಷೇತ್ರಗಳಲ್ಲಿ ಜೆಡಿಯು ಸೋಲಿಗೆ ಕಾರಣವಾಗಿತ್ತು. ಸೀಟು ಹಂಚಿಕೆಯಲ್ಲಿ ತಮ್ಮ ಪಕ್ಷಕ್ಕೆ 29 ಕ್ಷೇತ್ರಗಳು ಮಾತ್ರ ಸಿಕ್ಕಿದ ಬಳಿಕ ಪಾಸ್ವಾನ್ ಕಣದಿಂದ ಹಿಂದೆ ಸರಿದರು. ಅಲ್ಲದೆ ಅರ್ಹತೆಗಿಂತ ಹೆಚ್ಚಿನ ಕ್ಷೇತ್ರವನ್ನು ಎಲ್‌ಜೆಪಿ (ಆರ್‌ವಿ)ಗೆ ಕೊಡಲಾಗಿದೆ ಎನ್ನುವ ಅಭಿಪ್ರಾಯಗಳೂ ಇವೆ.
ರಾಜಕೀಯ ರಣತಂತ್ರಗಾರರಾಗಿದ್ದ ಪ್ರಶಾಂತ್ ಕಿಶೋರ್ ರಾಜಕೀಯ ಪ್ರವೇಶಿಸಿ ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ನಿರೀಕ್ಷೆ ಇತ್ತು. ತೇಜಸ್ವಿ ಯಾದವ್ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳೂ ಇದ್ದವು. ಆದರೆ ‘ಪಕ್ಷದ ಹಿತಾಸಕ್ತಿ’ಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೊನೆ ಕ್ಷಣದಲ್ಲಿ ಕಣದಿಂದ ಹಿಂದೆ ಸರಿದಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿದರೆ ಪಕ್ಷ ಸಂಘಟನೆಯ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ಅವರು ಹೇಳಿದ್ದರು.
ತಮ್ಮ ಜನ ಸುರಾಜ್ ಪಕ್ಷದ ಏಕೈಕ ಪ್ರಚಾರಕರಾಗಿದ್ದ ಪ್ರಶಾಂತ್ ಕಿಶೋರ್, ಸ್ಪರ್ಧಿಸದೇ ಇರಲು ಮೊದಲೇ ತೀರ್ಮಾನ ತೆಗೆದುಕೊಂಡಿದ್ದರೂ, ಬಳಿಕ ಅದನ್ನು ಘೋಷಿಸಿದರು ಎನ್ನಲಾಗಿದೆ. ಅವರ ಪಕ್ಷ ಚುನಾವಣೆಯಲ್ಲಿ ಸೋಲುವುದು ಗೊತ್ತಿದ್ದೇ ಅವರು ಸ್ಪರ್ಧಿಸದೇ ಇರುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರ ವಿರೋಧಿಗಳು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.