ADVERTISEMENT

ಮಾಜಿ ಸಿಎಂ ಕೊಲೆ ಯತ್ನ; ಇಂತಹ ಪ್ರಚಾರವನ್ನು ದೆಹಲಿ ಜನ ಕಂಡಿರಲಿಲ್ಲ: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 10:06 IST
Last Updated 19 ಜನವರಿ 2025, 10:06 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

ಪಿಟಿಐ ಚಿತ್ರ

ನವದೆಹಲಿ: ಚುನಾವಣಾ ಪ್ರಚಾರದ ವೇಳೆ ತಮ್ಮ ವಾಹನದ ಮೇಲೆ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದ ಎಎಪಿ ನಾಯಕ ಅರವಿಂದ ಕೇಜ್ರಿವಾಲ್‌ ಅವರು, ತಮ್ಮ ಜೀವವು ದೇಶಕ್ಕಾಗಿ ಮುಡಿಪಾಗಿದೆ. ಆದರೆ, ಚುನಾವಣಾ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿಯೊಬ್ಬರ ಕೊಲೆಗೆ ಯತ್ನಿಸಿದ ಸನ್ನಿವೇಶವನ್ನು ದೆಹಲಿ ಜನರು ಈ ಹಿಂದೆ ಕಂಡಿರಲಿಲ್ಲ ಎಂದು ಭಾನುವಾರ ಹೇಳಿದ್ದಾರೆ.

ADVERTISEMENT

ನವದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಪರ್ವೇಶ್‌ ವರ್ಮಾ ಅವರ ಗೂಂಡಾಗಳು, ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದ ಕೇಜ್ರಿವಾಲ್‌ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಎಎಪಿ ನಾಯಕರು ಶನಿವಾರ ದೂರಿದ್ದರು.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಎಎಪಿ ಮುಖ್ಯಸ್ಥ ಕೇಜ್ರಿವಾಲ್‌, 'ಮಾಜಿ ಮುಖ್ಯಮಂತ್ರಿಯೊಬ್ಬರ ಹತ್ಯೆಗೆ ದಾಳಿ ನಡೆಸಿದಂತಹ ಈ ರೀತಿಯ ಪ್ರಚಾರ ಸಮಾವೇಶ ಮತ್ತು ಗಲಭೆಗೆ ದೆಹಲಿಯ ಜನರು ಎಂದೂ ಸಾಕ್ಷಿಯಾಗಿರಲಿಲ್ಲ. ಅವರು ಹೀನಾಯವಾಗಿ ಸೋಲುತ್ತಿದ್ದಾರೆ. ಹಾಗಾಗಿಯೇ ಈ ರೀತಿ ಪ್ರಚಾರ ನಡೆಸುತ್ತಿದ್ದಾರೆ' ಎಂದು ಬಿಜೆಪಿಯನ್ನು ಗುರಿಯಾಗಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಜ್ರಿವಾಲ್‌ 20,000 ಮತಗಳ ಅಂತರದಿಂದ ಸೋಲು ಕಾಣಲಿದ್ದಾರೆ ಎಂದು ವರ್ಮಾ ಹೇಳಿರುವುದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, 'ಕೆಲವು ದಿನಗಳವರೆಗೆ ಅವರು ಕನಸು ಕಾಣುತ್ತಿರಲಿ ಬಿಡಿ' ಎಂದು ತಿವಿದಿದ್ದಾರೆ.

ಸರ್ಕಾರಿ ನೌಕರರಿಗೆ ವಸತಿ ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿದ ಕೇಜ್ರಿವಾಲ್‌, 'ಕೇಂದ್ರ ಸರ್ಕಾರ ಭೂಮಿ ನೀಡಿದರೆ, ದೆಹಲಿ ಸರ್ಕಾರ ಮನೆಗಳನ್ನು ನಿರ್ಮಿಸಲಿದೆ. ಆ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ' ಎಂದು ತಿಳಿಸಿದ್ದಾರೆ.

'ಪೌರಕಾರ್ಮಿಕರನ್ನು ಮೊದಲ ಫಲಾನುಭವಿಗಳನ್ನಾಗಿಸಿ ಯೋಜನೆಯನ್ನು ಆರಂಭಿಸಲಾಗುವುದು. ನಂತರ ಇತರ ಸರ್ಕಾರಿ ನೌಕರರಿಗೆ ಕೆಲವು ಸರಳ ಷರತ್ತುಗಳೊಂದಿಗೆ ಮನೆಗಳನ್ನು ಒದಗಿಸಲಾಗುವುದು' ಎಂದಿದ್ದಾರೆ.

ನವದೆಹಲಿಯಲ್ಲಿ ಜಿದ್ದಾಜಿದ್ದಿ
ಎಎಪಿಯಿಂದ ಕೇಜ್ರಿವಾಲ್‌, ಬಿಜೆಪಿಯಿಂದ ಪರ್ವೇಶ್‌ ವರ್ಮಾ ಕಣಕ್ಕಿಳಿದಿರುವ ನವದೆಹಲಿ ಕ್ಷೇತ್ರದಲ್ಲಿ, ಮಾಜಿ ಸಿಎಂ ಶೀಲಾ ದೀಕ್ಷಿತ್‌ ಅವರ ಪುತ್ರ, ಮಾಜಿ ಸಂಸದ ಸಂದೀಪ್‌ ದೀಕ್ಷಿತ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ, ಈ ಕ್ಷೇತ್ರವು ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾಗಲಿದೆ.

ಕೇಜ್ರಿವಾಲ್‌ ಅವರು ಇದೇ ಕ್ಷೇತ್ರದಲ್ಲಿ 2013ರಲ್ಲಿ ಶೀಲಾ ದೀಕ್ಷಿತ್‌ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರಿದಿಂದ ಸೋಲಿಸಿದ್ದರು. 2015ರ ವೇಳೆಗೆ ಜಯದ ಅಂತರವನ್ನು 31 ಸಾವಿರಕ್ಕೆ ಹೆಚ್ಚಿಸಿಕೊಂಡಿದ್ದ ಅವರಿಗೆ, 2020ರಲ್ಲಿ ಅಲ್ಪ ಹಿನ್ನಡೆಯಾಗಿತ್ತು. ಗೆಲುವಿನ ಅಂತರ 21 ಸಾವಿರಕ್ಕೆ ಕುಸಿದಿತ್ತು.

ಕಳೆದ ಎರಡೂ ಚುನಾವಣೆಗಳಲ್ಲಿ 25 ಸಾವಿರಕ್ಕಿಂತ ಹೆಚ್ಚು ಮತ ಗಳಿಸಿರುವ ಬಿಜೆಪಿ, ರಣತಂತ್ರಗಳನ್ನು ಹೆಣೆಯುತ್ತಿದೆ. ಆದರೆ, 2020ರಲ್ಲಿ ಕೇವಲ 3,220 ಮತ ಪಡೆದಿರುವ ಕಾಂಗ್ರೆಸ್‌ ಏನೆಲ್ಲ ಮ್ಯಾಜಿಕ್‌ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದೆ. 841 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಸೋಮವಾರದ (ಜ.20) ವರೆಗೆ ಸಮಯವಿದೆ. ಫೆಬ್ರುವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.