ADVERTISEMENT

ದೇಶದಲ್ಲಿ ಚುನಾವಣಾ ದಿನಾಂಕಗಳಿಗೆ ಅನುಸಾರವಾಗಿ ತೈಲ ಬೆಲೆ ನಿರ್ಧಾರ: ಕಾಂಗ್ರೆಸ್

ಐಎಎನ್ಎಸ್
Published 11 ಸೆಪ್ಟೆಂಬರ್ 2022, 15:39 IST
Last Updated 11 ಸೆಪ್ಟೆಂಬರ್ 2022, 15:39 IST
   

ನವದೆಹಲಿ: ದೇಶದಲ್ಲಿ ಚುನಾವಣಾ ದಿನಾಂಕಗಳಿಗೆ ಅನುಸಾರವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ನಿಗದಿಪಡಿಸಲಾಗುತ್ತಿದೆ. ಅಂತರರಾಷ್ಟ್ರೀಯ ದರಕ್ಕೆ ಅನುಗುಣವಾಗಿ ಅಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಗೌರವ್‌ ವಲ್ಲಭ್‌ ಅವರು, ಸದ್ಯದ ಹಣದುಬ್ಬರ, ಜಿಡಿಪಿ ಬೆಳವಣಿಗೆ ಮತ್ತು ರೂಪಾಯಿ ಕುಸಿತವು ದೇಶದಲ್ಲಿ ಆರ್ಥಿಕ ವ್ಯವಸ್ಥೆಯನ್ನು ಹೇಗೆ ನಿಭಾಯಿಸಲಾಗುತ್ತಿದೆ ಎಂಬ ಚಿತ್ರವಣವನ್ನು ನೀಡುವ ಕೆಲವು ಉದಾಹರಣೆಗಳಾಗಿವೆ ಎಂದು ಹೇಳಿದ್ದಾರೆ.

ಹಣದುಬ್ಬರ ಪ್ರಮಾಣವು ಕಳೆದ ಏಳು ತಿಂಗಳಿನಿಂದ ಶೇ 6ಕ್ಕಿಂತ ಹೆಚ್ಚಾಗಿದೆ. ಆಹಾರ, ತರಕಾರಿ ಮತ್ತು ತೈಲ ದರ ಏರಿಕೆಯು ಮಧ್ಯಮ ಮತ್ತು ಕೆಳ ವರ್ಗದ ಜನರನ್ನು ಸಂಕಷ್ಟಕ್ಕೆ ದೂಡಿವೆ. ಸರ್ಕಾರವು ತೈಲ ಬೆಲೆ ವಿಚಾರದ ಬಗ್ಗೆ ಗಮನ ನೀಡುತ್ತಿಲ್ಲ. ಎಲ್ಲ ಆರ್ಥಿಕ ಚಟುವಟಿಕೆಗಳಲ್ಲೂ ನಕಾರಾತ್ಮ ಪರಿಣಾಮಗಳು ಉಂಟಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸರ್ಕಾರದ ನಿಷ್ಕ್ರಿಯತೆಯನ್ನು ತೋರುತ್ತದೆ ಎಂದು ಟೀಕಿಸಿದ್ದಾರೆ.

ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಕಳೆದ ಕೆಲವು ತಿಂಗಳುಗಳಿಂದ ಇಳಿಮುಖವಾಗಿವೆ. ಆದರೂ ಅದರ ಪರಿಣಾಮ ಭಾರತದಲ್ಲಿ ಕಂಡು ಬರುತ್ತಿಲ್ಲ. ಜಾಗತಿಕ ದರಕ್ಕೆ ಅನುಸಾರವಾಗಿ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಬದಲಾವಣೆಯಾಗುತ್ತಿಲ್ಲ ಎಂದು ದೂರಿದ್ದಾರೆ.

'ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಚುನಾವಣೆಗಳು ಮುಗಿದ ಬಳಿಕ ತೈಲ ದರವನ್ನು ಮಾರ್ಚ್‌ 20 ರಿಂದ 31ರ ಅವಧಿಯಲ್ಲಿ 9 ಬಾರಿ ಹೆಚ್ಚಿಸಲಾಯಿತು' ಎಂದು ಆರೋಪಿಸಿದ್ದಾರೆ.

ಮೇ 21 ರಂದು ಸರ್ಕಾರವು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ₹ 8 ಮತ್ತು ₹ 6 ರಷ್ಟು ಇಳಿಕೆ ಮಾಡಿತ್ತು. ಇದರಿಂದಾಗಿ ಪ್ರತಿ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಕ್ರಮವಾಗಿ ₹ 9.5 ರಷ್ಟು ಹಾಗೂ ₹ 7 ರಷ್ಟು ಇಳಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.